Connect with us

Districts

ಗದಗನಲ್ಲಿ ಚೊಚ್ಚಲ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ

Published

on

ಗದಗ: ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ವರ್ಷದಿಂದ ಭೀಕರ ಬರಗಾಲ ತಾಂಡವಾಡುತ್ತಿದೆ. ಈ ಸಂದರ್ಭದಲ್ಲಿ ಮದುವೆ, ಸೀಮಂತ ಮುಂತಾದ ಕಾರ್ಯಕ್ರಮಗಳನ್ನು ಮಾಡುವುದು ಸಾಮಾನ್ಯ ಜನರಿಗೆ ಕಷ್ಟವಾಗುತ್ತದೆ. ಹೀಗಾಗಿ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದ ಹಿರಿಯರು ಒಟ್ಟಾಗಿ ಗ್ರಾಮದ ಎಲ್ಲಾ ಜಾತಿ ಧರ್ಮದ ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡಿದ್ದಾರೆ.

ಶ್ರೀಶರಣ ಬಸವೇಶ್ವರ ಪುರಾಣದ ಸಂಪ್ರದಾಯದಂತೆ ಶಿವಶರಣೆ ಮಾದಮ್ಮನಿಗೆ ಸೀಮಂತ ಮಾಡುವ ಸನ್ನಿವೇಶ ಶರಣ ಬಸವೇಶ್ವರ ಪುರಾಣದಲ್ಲಿ ಬರುತ್ತೆ. ಹಾಗಾಗಿ ಮಾದಮ್ಮನಿಗೆ ಕಾಲ್ಪನಿಕ ಸೀಮಂತ ಮಾಡೋ ಬದಲಾಗಿ ಊರ ಗರ್ಭಿಣಿಯರಿಗೆ ಸೀಮಂತ ಮಾಡಿದ್ದಾರೆ. ಈ ಬಾರಿಯೂ ಬರಗಾಲ ಆವರಿಸಿದ್ದರಿಂದ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ಗ್ರಾಮಸ್ಥರು ಸಾಮೂಹಿಕ ಸೀಮಂತ ಕಾರ್ಯವನ್ನು ಏರ್ಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 21 ಗರ್ಭಿಣಿಯರಿಗೆ ಮುತ್ತೈದೆಯರಿಂದ ಆರತಿ ಬೆಳಗಿ, ಹೂ ಗಳಿಂದ ಅಲಂಕರಿಸಿ, ಬಾಗಿನ ತುಂಬಿ ಸೀಮಂತ ಕಾರ್ಯಕ್ರಮ ನೆರವೇರಿಸಿದರು.

ಭರ್ಜರಿ ಊಟ: ಇನ್ನು ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ ಗ್ರಾಮಸ್ಥರಿಗೆಲ್ಲರಿಗೂ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಹೋಳಿಗೆ, ಕರ್ಚಿಕಾಯಿ, ಖಡಕ್ ರೊಟ್ಟಿ, ಪಲ್ಲೆ ಬಗೆ ಬಗೆಯ ಚಟ್ನಿಗಳು ಸೇರಿದಂತೆ ಅನೇಕ ಉತ್ತರ ಕರ್ನಾಟಕ ಶೈಲಿಯ ಖಾದ್ಯಗಳು ಕಾರ್ಯಕ್ರಮಕ್ಕೆ ಆಗಮಿಸಿದವರ ಬಾಯಲ್ಲಿ ನೀರು ಜಿನುಗಿಸುವಂತೆ ಮಾಡಿದ್ದವು. ಗರ್ಭಿಣಿಯರು ಎಲ್ಲರ ಜೊತೆ ಊಟ ಮಾಡಿ ತಮ್ಮ ಬಯಕೆಗಳನ್ನು ಈಡೇರಿಸಿಕೊಂಡರು.

ಇದೇ ಸಂದರ್ಭದಲ್ಲಿ ಗ್ರಾಮದ 85 ವರ್ಷ ವಯಸ್ಸಿನ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲಾಯಿತು. ಸೀಮಂತ ಕಾರ್ಯಕ್ಕೆ ಜಾತಿ ಬೇಧ ಮರೆತು ಎಲ್ಲರೂ ಭಾಗವಹಿಸಿದ್ದು ವಿಶೇಷವಾಗಿತ್ತು.

 

Click to comment

Leave a Reply

Your email address will not be published. Required fields are marked *