– ಇಂದು ಶ್ರೀಗಳನ್ನು ನೆನೆದು ಭಾವುಕರಾದ್ರು ಭಕ್ತರು
ತುಮಕೂರು: ಬಳ್ಳಾರಿ ಜಿಲ್ಲೆಯ ಭಕ್ತರೊಬ್ಬರು ಮೂರು ಬಾರಿ ಸಿದ್ದಗಂಗಾ ಮಠಕ್ಕೆ ಬಂದು ಶ್ರೀ ಶಿವಕುಮಾರ ಸ್ವಾಮೀಜಿ ಬಳಿಯೇ ತಮ್ಮ ಮಗುವಿನ ನಾಮಕರಣ ಮಾಡಿಸಬೇಕು ಎಂದು ನಾಲ್ಕು ವರ್ಷದಿಂದ ಕಾದು ಕುಳಿತಿದ್ದರು ಅಲ್ಲದೆ ತನ್ನ ಮಗಳಿಗೆ ನಾಮಕರಣ ಮಾಡಿರಿಲಿಲ್ಲ.
ಹೌದು, ಸಿದ್ದಗಂಗಾ ಶ್ರೀಗಳ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಬಳ್ಳಾರಿಯ ದಂಪತಿ, ಮೂರು ಬಾರಿ ಸಿದ್ದಗಂಗಾ ಮಠಕ್ಕೆ ಬಂದರೂ ಶ್ರೀಗಳಿಂದ ತಮ್ಮ ಮಗುವಿಗೆ ನಾಮಕರಣ ಮಾಡಿಸಲು ಸಾಧ್ಯವಾಗಿರಲಿಲ್ಲ. ಆಗ ಮಠದ ಕಿರಿಯ ಶ್ರೀಗಳು ಶಿವಕುಮಾರ ಸ್ವಾಮೀಜಿಗಳು ಗುಣಮುಖರಾದ ಮೇಲೆ ನಾವೇ ನಿಮ್ಮನ್ನು ಕರೆಸಿಕೊಂಡು ನಾಮಕರಣ ಕಾರ್ಯ ಮಾಡಿಸಿಕೊಡುತ್ತೇವೆ ಎಂದು ತಿಳಿಸಿದ್ದರು. ಆದ್ರೆ ಸಿದ್ದಗಂಗಾ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮನಸ್ಸಿಗೆ ತುಂಬಾ ನೋವಾಯ್ತು. ಬಳಿಕ ಮಗಳಿಗೆ `ಶಿವಾನಿ’ ಎಂದು ನಾವೇ ಹೆಸರಿಟ್ಟೆವು ಎಂದು ದಂಪತಿ ಸ್ವಾಮೀಜಿಯನ್ನ ನೆನೆದು ಭಾವುಕರಾದರು. ಇದನ್ನೂ ಓದಿ:ಶಿವಕುಮಾರ ಶ್ರೀಗಳ 112ನೇ ಜಯಂತಿ-ಸಂತನಿಲ್ಲದ ಸಿದ್ದಗಂಗೆಯಲ್ಲಿ ಶಿವಯೋಗಿ ಸ್ಮರಣೆ
ಶ್ರೀ ಸಿದ್ದಗಂಗಾ ಸ್ವಾಮೀಜಿಗಳ 112 ನೇ ಜಯಂತಿ ಹಿನ್ನೆಲೆಯಲ್ಲಿ ಇಂದು ಸಿದ್ದಗಂಗಾ ಮಠದಲ್ಲಿ 112 ಮಕ್ಕಳಿಗೆ ಶ್ರೀಗಳ ಹೆಸರಿಟ್ಟು ನಾಮಕರಣ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಶ್ರೀಗಳ ಹೆಸರನ್ನು ನಾಮಕರಣ ಮಾಡಲು ಭಕ್ತಾಧಿಗಳು ತಮ್ಮ ಮಕ್ಕಳನ್ನು ಮಠಕ್ಕೆ ಕರೆತಂದಿದ್ದಾರೆ. ಹೈಕೋರ್ಟ್ ಲಾಯರ್ ಅಸೋಸಿಯೇಷನ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.
ಕೇವಲ ನಾಮಕರಣ ಮಾತ್ರವಲ್ಲದೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಕ್ಕಳಿಗೆ ನಾಮಕರಣಕ್ಕೆ ಬೇಕಾದ ತೊಟ್ಟಿಲು ಹಾಗೂ ಇತರೆ ವಸ್ತುಗಳು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.