– ಬೆಳಗ್ಗೆ 10:30 ರಿಂದ ಮೆರವಣಿಗೆ ಆರಂಭ
– ಭದ್ರತೆಗೆ 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಮಂಡ್ಯ: ಮದ್ದೂರಿನಲ್ಲಿಂದು (Madduru) ಸಾಮೂಹಿಕ ಗಣೇಶ ವಿಸರ್ಜನಾ (Ganesh Procession) ಮೆರವಣಿಗೆ ನಡೆಯಲಿದೆ. 28ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಮೆರವಣಿಗೆ ನಡೆಯಲಿದ್ದು 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆಯಿದೆ.
ಬೆಳಗ್ಗೆ 10:30ಕ್ಕೆ ಮದ್ದೂರು ಪಟ್ಟಣದಿಂದ ಮೆರವಣಿಗೆ ಆರಂಭವಾಗಿ ಮೂರು ಕಿ.ಮೀ ಸಾಗಿ ಶಿಂಷಾ ನದಿಯಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ. ಈ ಕಾರಣಕ್ಕೆ ಮದ್ದೂರು, ಮಳವಳ್ಳಿ, ಮಂಡ್ಯ ತಾಲೂಕಿನಲ್ಲಿ ಇಂದು ಮದ್ಯ ಮಾರಾಟ, ಸಾಗಾಣಿಕೆಗೆ ಬ್ರೇಕ್ ಹಾಕಲಾಗಿದೆ.
ಮದ್ದೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಪ್ರತಿಷ್ಠಾಪಿಸಿರುವ ಎಲ್ಲಾ ಗಣೇಶ ಮೂರ್ತಿಗಳನ್ನು ಗ್ರಾಮಕ್ಕೆ ತರುವಂತೆ ಕರೆ ನೀಡಲಾಗಿದೆ. ನಂತರ ಕಾಶಿ ವಿಶ್ವಾನಾಥ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಲಿದೆ.
ಈ ಮೆರವಣಿಗೆ ಹೊಳೆಬೀದಿ, ಪೇಟೇಬೀದಿ , ಟಿಬಿ ಸರ್ಕಲ್, ಹಳೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚರಿಸಿ ಕೊಲ್ಲಿ ಸರ್ಕಲ್‌ನಲ್ಲಿ ಅಂತ್ಯವಾಗಲಿದೆ. ಬಳಿಕ ಹೊಳೆ ಆಂಜನೇಯ ದೇವಾಲಯ ಬಳಿಯ ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತದೆ. ಇದನ್ನೂ ಓದಿ: ಇದನ್ನೂಓದಿ: ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು ತೂರಲು ಪ್ರಚೋದನೆ ಏನು? – ಇಲ್ಲಿದೆ ಇನ್‌ಸೈಡ್ ಸ್ಟೋರಿ
ಮದ್ದೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲು ಸಂಘಟನೆಗಳು ನಿರ್ಧಾರ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ 5 ಮಂದಿ ಎಸ್ಪಿ, 4 ಮಂದಿ ಎಎಸ್ಪಿ ಸೇರಿದಂತೆ ಭದ್ರತೆಗೆ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನ ನಡೆಯದೇ ಇರಲು ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ, ಚಾಮರಾಜನಗರ, ಹಾಸನ ಸೇರಿ ಹಲವು ಜಿಲ್ಲೆ ಪೊಲೀಸರು ಮದ್ದೂರಿಗೆ ಆಗಮಿಸಿದ್ದಾರೆ. ಕೆಎಸ್ಆರ್‌ಪಿ, ಡಿಎಆರ್ ತುಕಡಿ, ರ್ಯಾಪಿಡ್ ಆ್ಯಕ್ಷನ್ ಪೋರ್ಸ್ ಸಹ ನಗರಕ್ಕೆ ಬಂದಿದೆ. ಇದನ್ನೂ ಓದಿ: ಮುಂದಿನ ಜನ್ಮ ಅಂತಿದ್ರೆ ಮುಸ್ಲಿಂ ಆಗಿಯೇ ಹುಟ್ಟಬೇಕು: `ಕೈ’ ಶಾಸಕ ಸಂಗಮೇಶ್
ಮದ್ದೂರಿಗೆ ಬಿಜೆಪಿ ನಾಯಕರು
ಇಂದು ಮದ್ದೂರಿಗೆ ಬಿಜೆಪಿ ನಾಯಕರ ತಂಡ ಭೇಟಿ ನೀಡಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಸಿ.ಟಿ.ರವಿ, ಪ್ರತಾಪ್ ಸಿಂಹ, ಛಲವಾದಿ ನಾರಾಯಸ್ವಾಮಿ, ಸುಮಲತಾ ಅಂಬರೀಶ್ ಸೇರಿದಂತೆ ಹಲವು ನಾಯಕರು ಆಗಮಿಸಲಿದ್ದಾರೆ.
ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗುವುದಕ್ಕೂ ಮೊದಲು ಕಲ್ಲೆಸೆತದಲ್ಲಿ ಗಾಯಗೊಂಡವರ ಮನೆಗೆ ಭೇಟಿ ನೀಡಿ ಸ್ಥಳೀಯರಿಗೆ ಧೈರ್ಯ ತುಂಬಲಿದ್ದಾರೆ. ನಂತರ ಲಾಠಿ ಚಾರ್ಜ್ ವೇಳೆ ಗಾಯಗೊಂಡವರ ಮನೆಗಳಿಗೂ ಬಿಜೆಪಿ ನಾಯಕರು ಭೇಟಿ ನೀಡಲಿದ್ದಾರೆ.