ಐತಿಹಾಸಿಕ ರಹಸ್ಯಗಳ ಒಡಲು ಮಸ್ಕಿಯಲ್ಲಿ ಉತ್ಖನನ -4,000 ವರ್ಷಗಳ ಹಿಂದಿನ ಜೀವನಶೈಲಿ ಬಯಲು

Public TV
3 Min Read
Raichuru Maski

– ಭಾರತ, ಅಮೆರಿಕಾ, ಕೆನಡಾ ದೇಶದ 20 ಸಂಶೋಧಕರ ತಂಡದಿಂದ ಉತ್ಖನನ

ರಾಯಚೂರು: ಚಕ್ರವರ್ತಿ ಅಶೋಕನ ಶಿಲಾಶಾಸನದಿಂದ ವಿಶ್ವ ಪ್ರಸಿದ್ಧಿ ಪಡೆದಿರುವ ರಾಯಚೂರಿನ (Raichuru) ಮಸ್ಕಿ (Maski) ಮತ್ತೊಂದು ಐತಿಹಾಸಿಕ ಕುರುಹಿಗೆ ಸಾಕ್ಷಿಯಾಗಿದೆ. 4 ಸಾವಿರ ವರ್ಷಗಳ ಹಿಂದೆ ಇಲ್ಲಿ ಜನವಸತಿ ಇದ್ದ ಬಗ್ಗೆ ಹಲವು ವಿಷಯಗಳು ಉತ್ಖನನದಲ್ಲಿ ಬೆಳಕಿಗೆ ಬಂದಿದೆ. ಮೂರು ದೇಶಗಳ ಸಂಶೋಧಕರ ತಂಡ ಹೊಸ ವಿಚಾರಗಳನ್ನ ಹೊರತಂದಿದೆ.

ಅಶೋಕನ ಪೂರ್ವದಲ್ಲಿ ಸಾಕಷ್ಟು ವರ್ಷಗಳ ಹಿಂದೆಯೇ ಜನವಸತಿ ಇದ್ದ ಬಗ್ಗೆ ಸಂಶೋಧಕರು ಬೆಳಕು ಚೆಲ್ಲಿದ್ದಾರೆ. ಅಮೆರಿಕಾ, ಕೆನಡಾ ಹಾಗೂ ಭಾರತದ 20 ಜನ ಸಂಶೋಧಕರ ತಂಡ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ, ಬಯಲು ಆಂಜನೇಯ ದೇವಸ್ಥಾನ ಸೇರಿ ತಾಲೂಕಿನ ಹಲವೆಡೆ ಉತ್ಖನನ ನಡೆಸಿದೆ. ಉತ್ಖನನ ವೇಳೆ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರಾಚ್ಯ ಪಳಿಯುಳಿಕೆಗಳ ಸಂಗ್ರಹ ಮಾಡಲಾಗಿದೆ.ಇದನ್ನೂ ಓದಿ: ಪಹಲ್ಗಾಮ್ ದಾಳಿ ಹೊಣೆಯನ್ನ ಟಿಆರ್‌ಎಫ್ 2 ಬಾರಿ ಹೊತ್ತುಕೊಂಡಿದೆ: ವಿಶ್ವಸಂಸ್ಥೆ

ಮೂರು ದೇಶಗಳ ಜಂಟಿ ಸಂಶೋಧನೆ:
ನೊಯಿಡಾ ವಿವಿ ಪ್ರಾಧ್ಯಾಪಕ ಹೇಮಂತ್ ಕಡಾಂಬಿ, ಅಮೆರಿಕದ ಸ್ಕ್ಯಾನ್ ಪೋರ್ಡ್ ವಿವಿ ಪ್ರಾಧ್ಯಾಪಕ ಆ್ಯಂಡ್ರಿಮ್ ಎಂ. ಬವೆರ್, ಕೆನಡಾದ ಮ್ಯಾಕ್ ಗಿಲ್ ವಿವಿಯ ಪೀಟರ್ ಜಿ. ಜೋಹಾನ್ಸನ್, ಸಂಶೋಧನಾ ವಿದ್ಯಾರ್ಥಿಗಳು ಸೇರಿ 20 ಸಂಶೋಧಕರ ತಂಡ ಉತ್ಖನನ ಮಾಡಿದೆ. ಅಶೋಕ ಚಕ್ರವರ್ತಿ ಕಾಲಕ್ಕೂ ಮೊದಲೇ ಸಮೃದ್ದವಾಗಿದ್ದ ಮಸ್ಕಿ ಬಗ್ಗೆ ತಂಡ ಸುಮಾರು ಮೂರು ತಿಂಗಳ ಕಾಲ ಅಧ್ಯಯನ ಮಾಡಿದೆ. ಈ ಉತ್ಖನನ ಈಗ ಸ್ಥಳೀಯ ಸಂಶೋಧಕರು, ಇತಿಹಾಸ ತಜ್ಞರಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.

ಉತ್ಖನನ ಹಾಗೂ ಸಂಶೋಧನೆಗಾಗಿ 271 ಸ್ಥಳಗಳನ್ನು ಗುರುತಿಸಿಕೊಂಡಿದ್ದ ತಂಡ 11 ರಿಂದ 14ನೇ ಶತಮಾನದಲ್ಲಿ ಜನವಸತಿ ಇರುವ ಬಗ್ಗೆ ಸಂಶೋಧನೆ ಮಾಡಿದೆ. ಬೇರೆ ಬೇರೆ ಆಕಾರದ ಮನೆಗಳ ರಚನೆ, ಅವರು ಬಳಸುತ್ತಿದ್ದ ಮಣ್ಣಿನ ಮಡಿಕೆ, ಚಿನ್ನದ ಲೇಪನದ ವಸ್ತುಗಳು, ಮೂಳೆ ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ. ಆಗಿನ ಜನರ ಜೀವನ ಮಟ್ಟ, ಆಹಾರ ಪದ್ಧತಿಗಳ ಬಗ್ಗೆ ಸಂಶೋಧನೆ ನಡೆದಿದೆ. ಇದರಿಂದ ಮಸ್ಕಿಯ ಚಾರಿತ್ರಿಕ ಹಿನ್ನೆಲೆ, ಚಾರಿತ್ರಿಕ ಬೆಳವಣಿಗೆಯ ಹೊಸ ಸಾಕ್ಷಿಗಳು ಸಿಕ್ಕಂತಾಗಿದೆ. 4000 ವರ್ಷಗಳ ಹಿಂದೆ ಇತಿಹಾಸ ಹೇಗಿತ್ತು ಅನ್ನೋದು ತಿಳಿದು ಬರುತ್ತಿದೆ. ಮಧ್ಯಕಾಲೀನ ಸಮಯದ ಬಗ್ಗೆ ಸಂಶೋಧನೆ ಮಾಡುತ್ತಿದ್ದೇವೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ ನೊಯಿಡಾ ವಿವಿ ಪ್ರಾಧ್ಯಾಪಕ ಹೇಮಂತ್ ಕಡಾಂಬಿ ತಿಳಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ಉತ್ಖನನ:
ಈ ಹಿಂದೆ ಸಂಶೋಧಕ ಬಿ.ಕೆ.ಥಾಫರ್, 1870ರಲ್ಲಿ ಸಂಶೋಧಕ ಬ್ರೂಸ್ ಫೂಟ್, ನಂತರ ಹೈದ್ರಾಬಾದ್‌ನ ಪುರಾತತ್ವ ಇಲಾಖೆಯಿಂದ, ಸ್ವಾತಂತ್ರ‍್ಯ ನಂತರ 1954ರಲ್ಲೂ ಮಸ್ಕಿಯಲ್ಲಿ ಉತ್ಖನನ ನಡೆದಿತ್ತು. ಆಗಾಗ ಸಂಶೋಧಕರು ಮಸ್ಕಿಯ ಹಲವಾರು ಪ್ರದೇಶಗಳಲ್ಲಿ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಈಗ ಅಮೇರಿಕಾ, ಕೆನಡಾ ಹಾಗೂ ಭಾರತದ ಸಂಶೋಧಕರ ತಂಡದಿಂದ ಉತ್ಖನನ ನಡೆದು ಸಾಕಷ್ಟು ಅಂಶಗಳನ್ನ ಕಲೆ ಹಾಕಿದ್ದಾರೆ.

ಅಶೋಕನ ಕಾಲದ ದಕ್ಷಿಣ ಪ್ರಾಂತ್ಯದ ಮೌರ್ಯರ ರಾಜಧಾನಿ ಸುವರ್ಣಗಿರಿ ಎಂಬುದು ಈ ಹಿಂದೆಯೆ ತಿಳಿದು ಬಂದಿದೆ. ಆದ್ರೆ ಸಂಶೋಧಕರಲ್ಲಿ ಇನ್ನೂ ಸ್ಥಳದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಮಸ್ಕಿಯಲ್ಲಿ ಬೃಹತ್ ಶಿಲಾಯುಗ, ಬೃಹತ್ ಶಿಲಾ ಗೋರಿಗಳು, ಚಿನ್ನದಿಂದ ಮಾಡಿದ ಅನೇಕ ವಸ್ತುಗಳು ಲಭ್ಯವಾಗಿರುವುದರಿಂದ ಮಸ್ಕಿಯೇ ಸುವರ್ಣಗಿರಿ ಇರಬಹುದು ಅನ್ನೋ ಬಗ್ಗೆಯೂ ಸಂಶೋಧನೆ ನಡೆದಿದೆ. ಈ ಉತ್ಕನನದಿಂದ ಊಹೆಗೆ ಈಗ ಪುಷ್ಟಿ ಸಿಗುತ್ತಿದೆ, ಆದ್ರೆ ಖಚಿತ ಮಾಹಿತಿಗಳೊಂದಿಗೆ ದಾಖಲಾಗಬೇಕಿದೆ ಅಂತ ಸ್ಥಳೀಯ ಇತಿಹಾಸ ತಜ್ಞ ಚನ್ನಬಸವ ಹಿರೇಮಠ ಹೇಳಿದ್ದಾರೆ.

ಇತಿಹಾಸದಲ್ಲಿ ಅಡಗಿರುವ ಅನೇಕ ವಿಷಯಗಳನ್ನ ಹೊರತೆಗೆಯಲು ಹಿಂದಿನಿಂದಲೂ ಅನೇಕ ಸಂಶೋಧಕರು ಮಸ್ಕಿಯಲ್ಲಿ ಉತ್ಖನನ, ಸಂಶೋಧನೆ ನಡೆಸಿದ್ದಾರೆ. ಅನೇಕ ಪ್ರಾಚ್ಯ ಅವಶೇಷಗಳು ಲಭ್ಯವಾಗಿರುವುದರಿಂದ ಸಾಕಷ್ಟು ರಹಸ್ಯಗಳನ್ನು ಮಸ್ಕಿ ತನ್ನ ಮಡಿಲಲ್ಲಿ ಉಳಿಸಿಕೊಂಡಿದೆ. ಈಗ 20 ಜನ ಸಂಶೋಧಕರ ತಂಡ ನಡೆಸಿದ ಉತ್ಖನನದಿಂದ ಇನ್ನೂ ಯಾವೆಲ್ಲ ಹೊಸ ವಿಷಯಗಳು ಹೊರಬರುತ್ತವೆ ಅನ್ನೋ ಕುತೂಹಲ ಎಲ್ಲೆಡೆ ಮನೆಮಾಡಿದೆ.ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ | ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು

Share This Article