ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸೌಧದ ಆವರಣಕ್ಕೆ ಕಾರು ನುಗ್ಗಿಸಿ, ಹೂಗುಚ್ಛ ಇಟ್ಟು, ಸ್ಪೀಕರ್ ಕಾರಿನ ಮೇಲೆ ಇಂಕ್ ಎರಚಿ ಪರಾರಿಯಾಗಿದ್ದ ಆಗಂತುಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಯನ್ನು ಸರಬ್ಜಿತ್ ಸಿಂಗ್ ಎಂದು ಗುರುತಿಸಲಾಗಿದ್ದು, ಉತ್ತರ ದೆಹಲಿಯ ರೂಪ್ ನಗರದಿಂದ ಬಂಧಿಸಲಾಗಿದೆ. ಇದನ್ನೂ ಓದಿ: ದೆಹಲಿ ವಿಧಾನಸೌಧದಲ್ಲಿ ಭದ್ರತಾಲೋಪ – ಸ್ಪೀಕರ್ ಕಾರ್ ಮೇಲೆ ಇಂಕ್ ಎರಚಿ ಆಗಂತುಕರು ಎಸ್ಕೇಪ್
ಯುಪಿ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಗೇಟ್ ಸಂಖ್ಯೆ 2 ಅನ್ನು ಮುರಿದು ವಿಧಾನಸಭೆ ಆವರಣವನ್ನು ಪ್ರವೇಶಿಸಿ ನಂತರ ತಪ್ಪಿಸಿಕೊಂಡಿದೆ. ಘಟನೆಯಾದ ಕೆಲವು ಗಂಟೆಗಳ ಬಳಿಕ ನಡೆದ ತೀವ್ರ ಶೋಧ ಕಾರ್ಯಾಚರಣೆಯಲ್ಲಿ ಮುಸುಕುಧಾರಿ ವ್ಯಕ್ತಿಯನ್ನು ಬಂಧಿಸಿ, ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆಗಿದ್ದೇನು?
UP-26 AZ 8090 ಸಂಖ್ಯೆಯ ಟಾಟಾ ಸಿಯೆರಾ ಕಾರು, ಭದ್ರತೆಗಾಗಿ CRPF ಸಿಬ್ಬಂದಿ ನಿಯೋಜಿಸಲಾಗಿದ್ದ VIP ಪ್ರವೇಶದ್ವಾರದಲ್ಲಿ ಗೇಟ್ ಅನ್ನು ಭೇದಿಸಿ ಒಳಗೆ ಪ್ರವೇಶಿಸಿತು. ತಡೆಗೋಡೆಯನ್ನು ಭೇದಿಸಿ ಚಾಲಕ ವಾಹನವನ್ನು ಹಠಾತ್ತನೆ ನಿಲ್ಲಿಸಿ, ಗೇಟ್ ಬಳಿ ಹೂಗುಚ್ಛವನ್ನು ಇರಿಸಿ ನಂತರ ಎಸ್ಕೇಪ್ ಆಗಿದ್ದ.
ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯ ಕಡೆಗೆ ಆಗಂತುಕ ತೆರಳಿ ಮುಖಮಂಟಪದ ಬಳಿ ಹೂವಿನ ಪುಷ್ಪಗುಚ್ಛ ಇರಿಸಿ ಹೊರ ಹೋಗಿದ್ದಾನೆ ಎಂದು ದೆಹಲಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದರು. ಬಳಿಕ ಸ್ಪೀಕರ್ ಅವರ ಕಾರಿನ ಮೇಲೆ ಇಂಕ್ ಎರಚಿ ಚಾಲಕ ದುಷ್ಕೃತ್ಯ ಎಸಗಿದ್ದ. ಬಾಂಬ್ ನಿಷ್ಕ್ರಿಯ ದಳದ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಪುಷ್ಪಗುಚ್ಛದೊಳಗೆ ಇದುವರೆಗೆ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.ಇದನ್ನೂ ಓದಿ: ದೆಹಲಿ ವಿವಿಯ ಎರಡು ಕಾಲೇಜುಗಳಿಗೆ ಬಾಂಬ್ ಬೆದರಿಕೆ

