ಚಿತ್ರದುರ್ಗ: ಮಹೀಂದ್ರ ಸ್ಕಾರ್ಪಿಯೋ ಮತ್ತು ಎರ್ಟಿಗಾ ಕಾರುಗಳು ನಡುವೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಮೇಟಿಕುರ್ಕೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಮೃತರನ್ನು ಚಿತ್ರದುರ್ಗದ ನಿವಾಸಿ ಎಪಿಎಂಸಿ ಸದಸ್ಯ ಅನ್ವರ್ ಶಿವು (55), ಒಂದೇ ಕುಟುಂಬದ ಮೂರು ವರ್ಷದ ಬಾಲಕಿ, ಇಬ್ಬರು ಮಹಿಳೆಯರು, ಒಬ್ಬ ಪುರುಷರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 8 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು, ಒಬ್ಬ ವ್ಯಕ್ತಿ ಒಂದೇ ಕುಟುಂಬದವರು. ಇವರು ಎರ್ಟಿಗಾ ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗ ಕಡೆಗೆ ಬರುತ್ತಿದ್ದರು. ಇನ್ನೊಂದು ಕುಟುಂಬ ಮೃತರಾದ ಅನ್ವರ್ ಶಿವು, ಶಾನಿ ಮತ್ತು ಖಾಜಾಪೀರ್ ಶಾಕತ್ ಇವರು ಮಹೇಂದ್ರ ಸ್ಕಾರ್ಪಿಯೋ ಕಾರಿನಲ್ಲಿ ಚಿತ್ರದುರ್ಗ ಕಡೆಯಿಂದ ಬರುತ್ತಿದ್ದರು. ಈ ಸಂದರ್ಭದಲ್ಲಿ ಮೇಟಿಕುರ್ಕೆ ಗ್ರಾಮದ ಆತಿಥ್ಯ ಹೋಟೆಲ್ ಬಳಿ ಬರುತ್ತಿದ್ದಂತೆ ಎರ್ಟಿಗಾ ಕಾರಿನ ಟಯರ್ ಬ್ಲಾಸ್ಟ್ ಆಗಿದ್ದು, ಪರಿಣಾಮ ಡಿವೈಡರ್ ದಾಟಿ ಎಡಗಡೆಯಿಂದ ಬಲಗಡೆಗೆ ಬಂದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸ್ಕಾರ್ಪಿಯೋ ಕಾರಿಗೆ ರಭಸದಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯಾದ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡು ಪರಿಣಾಮ ಎರ್ಟಿಗಾ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 8 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಹಿರಿಯೂರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕನೂ ಕೂಡ ಸಾವನ್ನಪ್ಪಿದ್ದಾನೆ. ಇನ್ನೂ ಸ್ಕಾರ್ಪಿಯೋ ಕಾರಿನಲ್ಲಿದ್ದ ಅನ್ವರ್ ಶಿವು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೂಳಿದ ಶಾನಿ, ಖಾಜಾಪೀರ್ ಶಾಕತ್‍ಗೆ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎರ್ಟಿಗಾ ಕಾರಿನಲ್ಲಿದ್ದವರ ಮಾಹಿತಿ ಇನ್ನೂ ಪತ್ತೆಯಾಗಿಲ್ಲ.
ಅಪಘಾತ ನಡೆದ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಬಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಸ್ಥಳಕ್ಕೆ ಅಡಿಷನಲ್ ಎಸ್ಪಿ ರಾಮಲಕ್ಷ್ಮಣ ಅರಸಿದ್ದಿ ಹಾಗೂ ನೆಲಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತ ದೇಹಗಳನ್ನು ಹಿರಿಯೂರು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.