ವಿಜಯಪುರ: ಮಾರುತಿ ಆಲ್ಟೋ ಕಾರು ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳದ ನಾಲತವಾಡ ಗ್ರಾಮದ ಬಳಿ ನಡೆದಿದೆ.
ಲಿಂಗಸಗೂರಿನಿಂದ ನಾಲತವಾಡ ಗ್ರಾಮಕ್ಕೆ ಹೋಗುವಾಗ ಈ ಅವಘಡ ಸಂಭವಿಸಿದೆ. ಈ ಕಾರು ನಾಗರಾಜ ತುಪ್ಪದವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಈ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದಾಗ, ನಾಲತವಾಡ ಗ್ರಾಮದ ಬಳಿ ಹೋಗುತ್ತಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿ ಹೊತ್ತಿಕೊಂಡಿರುವುದು ತಿಳಿದ ಚಾಲಕ ಕಾರ್ ನಿಲ್ಲಿಸಿ, ಎಲ್ಲರೂ ಹೊರಗೆ ಬಂದಿದ್ದಾರೆ.
ಸದ್ಯಕ್ಕೆ ಈ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಾಂಗ್ ಜರ್ನಿಯಿಂದ ಕಾರಿನ ಇಂಜಿನ್ ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬೆಂಕಿ ಅವಘಡದಿಂದ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.