ಮಡಿಕೇರಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ನಲ್ಲಿ ನಡೆದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಹುತಾತ್ಮರಾದ ಕೊಡಗಿನ ಯೋಧ (Kodagu Soldiers) ದಿವಿನ್ ಅವರ ಅಂತ್ಯಕ್ರಿಯೆ ಬುಧವಾರ ಹುಟ್ಟೂರಿನಲ್ಲಿ ನೆರವೇರಿತು.
ಕೊಡಗು ಜಿಲ್ಲೆಯ ಆಲೂರು ಸಿದ್ದಾಪುರದ ಬಳಿಯ ಮಾಲಂಬಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಸಾಂಪ್ರದಾಯಿಕ ವಿಧಿ ವಿಧಾನ ನೆರವೇರಿಸಿದ ನಂತರ ಮಾಲಂಬಿಯ ಜಮೀನಿನಲ್ಲಿ ಚಿತೆಗೆ ಅಗ್ನಿಸ್ಪರ್ಶ ಮಾಡುವುದರೊಂದಿಗೆ ದಿವಿನ್ ಪಂಚಭೂತಗಳಲ್ಲಿ ಲೀನವಾದರು. ಇದನ್ನೂ ಓದಿ: ಅಶ್ವಮೇಧ ಕುದುರೆಯ ಓಟಕ್ಕೆ ಪ್ರಶಸ್ತಿಗಳ ಸುರಿಮಳೆ – KSRTCಗೆ 9 ಬಹುಮಾನ
Advertisement
Advertisement
ಇದಕ್ಕೂ ಮೊದಲು ಮೇಜರ್ ನಿಖಿಲ್ ಹಾಗೂ ಸುಬೇದಾರ್ ಮಹೇಶ್ ಜಾಧವ್ ಅವರ ನೇತೃತ್ವದಲ್ಲಿ ಆಗಮಿಸಿದ್ದ ಭಾರತೀಯ ಸೇನಾ ತಂಡ ಹಾಗೂ ಪೊಲೀಸರು ಕುಶಾಲತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿದರು. ಮಂಗಳವಾರ ರಾತ್ರಿ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಸೇನಾ ವಾಹನದ ಮೂಲಕ ಕುಶಾಲನಗರಕ್ಕೆ ತರಲಾಗಿತ್ತು. ಬುಧವಾರ ಬೆಳಗ್ಗೆ 8 ರಿಂದ 11 ಗಂಟೆ ವರೆಗೆ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿತ್ತು. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಾಚರಣೆ – ಒಂದೇ ದಿನದಲ್ಲಿ ಬಿಎಂಟಿಸಿಗೆ ಬಂತು 5.48 ಕೋಟಿ ರೂ.
Advertisement
Advertisement
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ರಾಜಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ತಹಶಿಲ್ದಾರ್ ಕಿರಣ್ ಗೌರಯ್ಯ, ಕುಶಾಲನಗರ ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ವಿ.ಪಿ ಶಶಿಧರ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ ಬೇಬಿಮ್ಯಾಥ್ಯು, ಕುಶಾಲನಗರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರು ಸೇರಿದಂತೆ ಹಲವರು ದಿವಿನ್ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚವಿರಿಸಿ ಅಂತಿಮ ನಮನ ಸಲ್ಲಿಸಿದರು.
ಬಳಿಕ ದಿವಿನ್ ಪಾರ್ಥಿವ ಶರೀರವನ್ನು ಕೂಡಿಗೆ, ಹೆಬ್ಬಾಲೆ ಮಾರ್ಗವಾಗಿ ಹುಟ್ಟೂರಾದ ಆಲೂರು ಸಿದ್ದಾಪುರಕ್ಕೆ ತರಲಾಯಿತು. ಅಲ್ಲಿ ದಿವಿನ್ ಓದಿದ್ದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಾಸಕ ಡಾ.ಮಂತರ್ ಗೌಡ ಅವರು ಸಾರ್ವಜನಿಕರ ದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಸಿದ್ದರು.
ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ ಬೋಪಯ್ಯ, ಮಾಜಿ ಸಚಿವ ಎಂ.ಪಿ ಅಪ್ಪಚ್ಚು ರಂಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರೊಬೆಷನರಿ ಎಸ್.ಪಿ ಬೆನಕ ಪ್ರಸಾದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ತಹಶೀಲ್ದಾರ್ ಶ್ರೀಧರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಸದಸ್ಯ ಸೂದನ ಈರಪ್ಪ, ಚಂದ್ರಾವತಿ ಬಡ್ಡಡ್ಕ, ಪ್ರಮುಖರಾದ ಎಚ್.ಎಸ್ ಚಂದ್ರಮೌಳಿ ಇತರರು ಅಂತಿಮ ನಮನ ಸಲ್ಲಿಸಿದರು.
ಇನ್ನೂ ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ಹುತಾತ್ಮ ಯೋಧ ದಿವಿನ್ ಕುಟುಂಬದ ಸಂಬಂಧಿ ಚಿರಾಗ್ ನೆರವೇರಿಸಿದರು. ದಿವಿನ್ ತಾಯಿ ಜಲಜಾಕ್ಷಿ ಅಂತಿಮ ದರ್ಶನ ಪಡೆದ ಬಳಿಕ ಚಿತೆಗೆ ಅಗ್ನಿಸ್ಪರ್ಶ ನೀಡಲಾಯಿತು.