ಮುಂಬೈ: 2017ರಲ್ಲಿ ಇಂಡೋ- ಚೀನಾ ಗಡಿಯಲ್ಲಿ ನಡೆದ ಗುಂಡಿನ ದಾಳಿಗೆ ವೀರಮರಣ ಹೊಂದಿದ್ದ ಮೇಜರ್ ಪ್ರಸಾದ್ ಮಹದಿಕ್ ಪತ್ನಿ ಗೌರಿ ಮಹದಿಕ್ ಅವರು ಪತಿಗೆ ಗೌರವ ಸಲ್ಲಿಸಲು ಸದ್ಯದಲ್ಲೇ ಭಾರತೀಯ ಸೇನೆ ಸೇರಲಿದ್ದಾರೆ.
ಮುಂಬೈ ವಿರಾರ್ ನಿವಾಸಿಯಾದ ಗೌರಿ ಮಹದಿಕ್(32) ಸದ್ಯದಲ್ಲಿಯೇ ಸೈನ್ಯ ಸೇರಲಿದ್ದಾರೆ. ಹೌದು, ಪತಿಯ ಸಾವಿನಿಂದ ಕಂಗೆಡದೇ ದೇಶಕ್ಕಾಗಿ ಪ್ರಾಣಬಿಟ್ಟ ಪತಿಗೆ ಗೌರವ ಸಲ್ಲಿಸಲು ಭಾರತೀಯ ಸೇನೆಗೆ ಸೇರಲು ಗೌರಿ ಪಣತೊಟ್ಟಿದ್ದರು. ಪತಿ ಕರ್ತವ್ಯವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಅದನ್ನು ಪೂರ್ಣಗೊಳಿಸಿ ಅವರಿಗೆ ನಾನು ನಿಜವಾದ ಗೌರವ ಸಲ್ಲಿಸಬೇಕು ಅಂತ ದಿಟ್ಟತನದಿಂದ ಬಂದ ಕಷ್ಟಗಳನ್ನು ಎದುರಿಸಿಕೊಂಡು, ಸೇವೆ ಆಯ್ಕೆ ಮಂಡಳಿ(ಎಸ್‍ಎಸ್‍ಬಿ) ಪರೀಕ್ಷೆ ಬರೆದು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿ(ಓಟಿಎ)ಗೆ ಆಯ್ಕೆಯಾಗಿದ್ದಾರೆ. ತರಬೇತಿ ನಂತರ ಮುಂದಿನ ವರ್ಷ ಗೌರಿ ಅವರು ಹುತಾತ್ಮ ಯೋಧರ ಪತ್ನಿಯರಿಗಾಗಿ ಮೀಸಲಾಗಿರುವ ತಾಂತ್ರಿಕೇತರ ಲಿಫ್ಟಿನೆಂಟ್ ಆಗಿ ಭಾರತೀಯ ಸೈನ್ಯಕ್ಕೆ ಸೇರಲಿದ್ದಾರೆ.
Advertisement
Advertisement
2018ರ ನವೆಂಬರ್- ಡಿಸೆಂಬರ್‍ನಲ್ಲಿ ನಡೆದ ಎಸ್‍ಎಸ್‍ಬಿ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳಿಂದ ಉತ್ತೀರ್ಣರಾಗಿರುವ ಗೌರಿ ಅವರು ಓಟಿಎದಲ್ಲಿ ತರಬೇತಿ ಪಡೆಯಲು ಅರ್ಹರಾಗಿದ್ದಾರೆ. ಏಪ್ರಿಲ್ ತಿಂಗಳಿಂದ ಆರಂಭವಾಗುವ 49 ವಾರಗಳ ತರಬೇತಿ ಮುಗಿಸಿದ ಬಳಿಕ 2020ರ ಮಾರ್ಚ್ ವೇಳೆ ಅವರು ಸೈನ್ಯಕ್ಕೆ ಸೇರ್ಪಡೆಯಾಗಲಿದ್ದಾರೆ.
Advertisement
Advertisement
ಸೈನ್ಯ ಸೇರಲು ಬಯಸುವ ಹುತಾತ್ಮ ಯೋಧರ ಪತ್ನಿಯರಿಗೆ ಎಸ್‍ಎಸ್‍ಬಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ವ್ಯಕ್ತಿತ್ವ, ಬುದ್ಧಿಮತ್ತೆ ಪರೀಕ್ಷೆ ಮತ್ತು ಸಂದರ್ಶನಗಳನ್ನು ಒಳಗೊಂಡ ಒಟ್ಟು ಮೂರು ಹಂತದಲ್ಲಿ ಈ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಬೆಂಗಳೂರು, ಭೋಪಾಲ್, ಅಲಹಾಬಾದ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿದ್ದು ಅದರಲ್ಲಿ ಅರ್ಹತೆ ಪಡೆದ 16 ಅಭ್ಯರ್ಥಿಗಳನ್ನು ಮುಂದಿನ ತರಬೇತಿಗೆ ಆಯ್ಕೆ ಮಾಡಲಾಗಿದೆ.
ಕಂಬೈನ್ಡ್ ಡಿಫೆನ್ಸ್ ಸರ್ವಿಸ್ (ಸಿಡಿಎಸ್) ಲಿಖಿತ ಪರೀಕ್ಷೆಯಿಂದ ನಮಗೆ ವಿನಾಯಿತಿ ನೀಡಲಾಗುತ್ತದೆ ಮತ್ತು ಭೋಪಾಲ್‍ನಲ್ಲಿ ನಡೆಯುವ ಮೌಖಿಕ ಪರೀಕ್ಷೆಗೆ ನೇರ ಅರ್ಹತೆಯನ್ನು ನೀಡಲಾಗುತ್ತದೆ. ಅಲ್ಲದೆ ಓಟಿಎದಲ್ಲಿ ನನ್ನ ಪತಿಗೆ ಸಿಕ್ಕ ಚೆಸ್ಟ್ ನಂಬರ್(28) ನನಗೂ ಸಿಕ್ಕಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಗೌರಿ ಮಹದಿಕ್ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv