ಲಕ್ನೋ: ಸಹೋದರನ ಜೊತೆಗೂಡಿ ಪ್ರಿಯಕರನನ್ನು ಹತ್ಯೆ ಮಾಡಿ ಮನೆಯ ಫ್ರಿಡ್ಜ್ ನಲ್ಲಿ ಬಚ್ಚಿಟ್ಟು ನಂತರ ಹತ್ತಿರದ ರೈಲ್ವೇ ಹಳಿಯಲ್ಲಿ ಎಸೆದ ವಿವಾಹಿತ ಮಹಿಳೆಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಸಹರಾನ್ಪೂರದ ಇಂದಿರಾನಗರದ ನಿವಾಸಿ ಅತೀಶ್ ಕೊಲೆಯಾದ ವ್ಯಕ್ತಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇರಣಾ ಮತ್ತು ಆಕೆಯ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಸೆ.24ರಂದು ಈ ಹತ್ಯೆ ನಡೆದಿದ್ದು ಸೆ.26ರಂದು ಮೃತ ದೇಹ ದೊರೆತಿತ್ತು ಎಂದು ಸಹರಾನ್ಪೂರ್ ಜಿಲ್ಲಾ ಪೊಲೀಸ್ ಅಧಿಕಾರಿ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಏನಿದು ಪ್ರಕರಣ?
ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಸಹರಾನ್ಪೂರ್‍ದ ಶಿವಪುರಿ ಶಂಶಾನ್‍ಘಾಟ್ ಬಳಿಯ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು. ಹಳಿಯಲ್ಲಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಆರಂಭದಲ್ಲಿ ಪೊಲೀಸರು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ಫಲಿತಾಂಶ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ನೀಡಿತ್ತು. ಕೊಲೆಯಾದ ವ್ಯಕ್ತಿ ಅತೀಶ್ ಬೆಳಕಿಗೆ ಬಂದ ನಂತರ ಪ್ರೇರಣಾ ಎಸ್‍ಎಸ್‍ಪಿ ಕಚೇರಿಗೆ ನೇರವಾಗಿ ತೆರಳಿ ಈ ಕೊಲೆಯನ್ನು ನಾನೇ ಮಾಡಿದ್ದೇನೆ ಎಂದು ತಿಳಿಸಿದ್ದಳು.
ಪ್ರೇರಣಾ ಹೇಳಿದ್ದು ಏನು?
ನಾನು ವಿವಾಹಿತ ಮಹಿಳೆಯಾಗಿದ್ದು, 6 ತಿಂಗಳ ಹಿಂದೆ ಗಂಡನ ಮನೆಯನ್ನು ಬಿಟ್ಟು ತವರು ಮನೆ ಸೇರಿದ್ದೆ. ಮದುವೆಯಾಗುವ ಮೊದಲು ನನಗೆ ಮತ್ತು ಅತೀಶ್ ನಡುವೆ ಅಕ್ರಮ ಸಂಬಂಧ ಇತ್ತು. ಸಮೀಪದ ಮನೆಯಲ್ಲಿ ವಾಸವಾಗಿದ್ದ ಈತ ನಾನು ತವರು ಮನೆಗೆ ಬಂದ ಬಳಿಕವೂ ಸೆಕ್ಸ್ ಗೆ ಒತ್ತಾಯಿಸುತ್ತಿದ್ದ. ನಾವಿಬ್ಬರೂ ಕೆಲವೊಮ್ಮೆ ರೆಡ್‍ಹ್ಯಾಂಡ್ ಗೆ ಸಿಕ್ಕಿಬಿದ್ದಿದ್ವಿ. ಇಷ್ಟಾಗ್ಯೂ ಆತ ಪ್ರತಿ ದಿನ ನೀನು ನನಗೆ ಸುಖ ಕೊಡಬೇಕು ಎಂದು ಒತ್ತಾಯಿಸುತ್ತಿದ್ದ.
ಈತನ ಈ ವಿಚಿತ್ರ ಬೇಡಿಕೆಯಿಂದ ನಾನು ರೋಸಿ ಹೋಗಿದ್ದೆ. ನಮ್ಮಿಬ್ಬರ ಸಂಬಂಧವನ್ನು ಮುಕ್ತಾಯಗೊಳಿಸುವ ಸಲುವಾಗಿ ಸೆ.24 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತನನ್ನು ಕರೆದು, ಇಲ್ಲಿಯವರೆಗೆ ನಡೆದಿದ್ದನ್ನು ಮರೆತು ಬಿಡು ಎಂದು ನಾನು ಮನವಿ ಮಾಡಿ ಬೇಡಿಕೊಂಡೆ. ಈ ವೇಳೆ ನನ್ನ ಸಹೋದರ ಬಂದ. ಈ ವೇಳೆ ಇವರಿಬ್ಬರ ಮಧ್ಯೆ ಜಗಳ ಪ್ರಾರಂಭವಾಯಿತು.
ಗಲಾಟೆ ಜೋರಾಗಿ ನನ್ನ ಸಹೋದರ ದುಪ್ಪಟ್ಟದಿಂದ ಆತನನ್ನು ಕೊಲೆ ಮಾಡಿದ. ಬಳಿಕ ಆತನ ದೇಹವನ್ನು ಯಾರಿಗೆ ತಿಳಿಯದೇ ಇರಲಿ ಎಂದು ಫ್ರಿಡ್ಜ್ ಒಳಗಡೆ ಇಟ್ಟೆವು. ಮನೆಯಲ್ಲಿ ಶವ ಇದ್ದರೆ ನಾವೇ ಕೊಲೆ ಮಾಡಿದ್ದೇವೆ ಎಂದು ತಿಳಿಯುವ ಕಾರಣ ಫ್ರಿಡ್ಜ್ ಮಾರಾಟ ಮಾಡಲು ತೀರ್ಮಾನಿಸಿದೆವು. ಮಾರಾಟ ಮಾಡುವ ನೆಪದಲ್ಲಿ ಫ್ರಿಡ್ಜ್ ಮನೆಯಿಂದ ವಾಹನಕ್ಕೆ ತುಂಬಿಸಿದೆವು. ದಾರಿ ಮಧ್ಯೆ ಶವವನ್ನು ರೈಲ್ವೇ ಟ್ರಾಕ್ ನಲ್ಲಿ ಎಸೆದು ನಂತರ ಫ್ರಿಡ್ಜ್ ಮಾರಾಟ ಮಾಡಿದೆವು ಎಂದು ಪ್ರೇರಣಾ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.