ಲಕ್ನೋ: ಪ್ರಿಯಕರನ ಕಿರುಕುಳ ತಾಳಲಾಗದೇ ವಿವಾಹಿತ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ಮುಜಫರ್ ನಗರ ಜಿಲ್ಲೆಯಲ್ಲಿ ನಡೆದಿದೆ.
ನಗ್ಮಾ(20) ಆತ್ಮಹತ್ಯೆಗೆ ಶರಣಾದ ಯುವತಿ. ಈ ಘಟನೆ ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಾಜಿಪುರ ಪ್ರದೇಶದಲ್ಲಿ ಶನಿವಾರ ನಡೆದಿದೆ. ನಗ್ಮಾ ತನ್ನ ಪೋಷಕರ ಮನೆಯಲ್ಲಿ ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
“ನನ್ನ ಮಗಳಿಗೆ ಶಾವೆಜ್ ಎಂಬಾತ ಪತಿಯಿಂದ ವಿಚ್ಛೇದನ ಪಡೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದನು. ಅಷ್ಟೇ ಅಲ್ಲದೇ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಕಿರುಕುಳ ನೀಡುತ್ತಿದ್ದನು” ಎಂದು ಮೃತ ನಗ್ಮಾ ತಂದೆ ಅನೀಸ್ ಅಹ್ಮದ್ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸತ್ಪಾಲ್ ಆಂಟಿಲ್ ತಿಳಿಸಿದ್ದಾರೆ.
ಈ ಬಗ್ಗೆ ನಗ್ಮಾ ಪತಿ ಕಾಸೀಫ್ ಪ್ರತಿಕ್ರಿಯಿಸಿ, ನಗ್ಮಾ ಆರೋಪಿಯ ಮಾತನ್ನು ಒಪ್ಪಿಕೊಳ್ಳದೆ ನಿರಾಕರಿಸಿದ್ದಾಳೆ. ನಂತರ ಆತ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕಿರುಕುಳ ನೀಡುತ್ತಿದ್ದನು. ಹೀಗಾಗಿ ನಗ್ಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಪೊಲೀಸರು ಆರೋಪಿ ಶಾವೆಜ್ ವಿರುದ್ಧ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಮೃತ ನಗ್ಮಾ ಮತ್ತು ಕಾಸಿಫ್ ಎಂಟು ತಿಂಗಳ ಹಿಂದೆ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.