ಕೋಲಾರ: ವ್ಯಕ್ತಿಯೊಬ್ಬ ಮದುವೆಗೆ ನಿರಾಕರಿಸಿದ ಎರಡು ಮಕ್ಕಳ ತಾಯಿಯನ್ನು ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರದ (Kolar) ಹೊರವಲಯದ ಬಂಗಾರಪೇಟೆ (Bangarapet) ಜಿಗ್ ಜಾಗ್ ರಸ್ತೆಯಲ್ಲಿ ನಡೆದಿದೆ.
ಬಂಗಾರಪೇಟೆ ತಾಲೂಕಿನ ಕತ್ತಹಳ್ಳಿ ಗ್ರಾಮದ ಸುಜಾತ (27) ಕೊಲೆಯಾದ ಮಹಿಳೆ. ಕೊಲೆ ಆರೋಪಿಯನ್ನು ಹೊಸಕೋಟೆ (Hosakote) ಇಂಡಸ್ ಬ್ಯಾಂಕ್‍ನ ಉದ್ಯೋಗಿ ಚಿರಂಜೀವಿ ಎಂದು ಗುರುತಿಸಲಾಗಿದೆ. ಆರೋಪಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುವಾಗ ಹಣವಸೂಲಿಗೆ ಹೋಗುತ್ತಿದ್ದಾಗ ಮಹಿಳೆಗೆ ಪರಿಚಯವಾಗಿದ್ದ ಎಂದು ತಿಳಿದು ಬಂದಿದೆ. ಕೃತ್ಯ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಚಿರಂಜೀವಿಯನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ: ಕೇರಳ | SAI ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರು ನೇಣಿಗೆ ಶರಣು

ಕತ್ತಿಹಳ್ಳಿಯಿಂದ ನರಸಾಪುರ ಕೈಗಾರಿಕಾ ಪ್ರದೇಶದ ಕಡೆ ಕೆಲಸಕ್ಕೆ ಹೊರಟಿದ್ದ ಮಹಿಳೆಯನ್ನು ಕೋಲಾರದ ಬಳಿ ಆರೋಪಿ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇಬ್ಬರಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಸುಜಾತ ಗಂಡನನ್ನು ತೊರೆದು ಪ್ರತ್ಯೇಕವಾಗಿ ವಾಸವಾಗಿದ್ದಳು. ಕಳೆದ ಕೆಲವು ದಿನಗಳಿಂದ ಚಿರಂಜೀವಿ ಸುಜಾತಾಳನ್ನ ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದ. ಇದಕ್ಕೆ ಸುಜಾತ ಒಪ್ಪಿರಲಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು.
ಕಳೆದ ರಾತ್ರಿ ಸಹ ಸುಜಾತಳ ಗ್ರಾಮಕ್ಕೆ ತೆರಳಿ ಮನೆ ಬಳಿ ಆರೋಪಿ ಹೋಗಿದ್ದ. ಈ ವೇಳೆ ಸುಜಾತ ಈತನನ್ನ ನಿರ್ಲಕ್ಷಿಸಿದ್ದಳು. ಇದರಿಂದ ಕೋಪಗೊಂಡ ಪಾಗಲ್ ಪ್ರೇಮಿ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಇನ್ನೂ ನರಸಾಪುರದಲ್ಲಿ ಸ್ಟಾಫ್ ನರ್ಸ್ ಆಗಿದ್ದ ಸುಜಾತ, ಕಳೆದ ಮೂರು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದಳು. ಈ ಹಿಂದೆಯೂ ಹಣಕಾಸು ವಿಚಾರಕ್ಕೆ ಸುಜಾತ ಮೇಲೆ ಆರೋಪಿ ಹಲ್ಲೆ ಮಾಡಿದ್ದ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿ ಚಿರಂಜೀವಿ ವಿರುದ್ಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆವು, ಆದರೂ ಕ್ರಮ ಕೈಗೊಳ್ಳಲಿಲ್ಲ, ಈಗ ನನ್ನ ಮಗಳನ್ನು ಕೊಲೆ ಮಾಡಿ ಬಿಟ್ಟ, ಆಗಲೇ ಸರಿಯಾದ ಕ್ರಮ ಕೈಗೊಂಡಿದ್ದಿದ್ದರೆ ಇವತ್ತು ನನ್ನ ಮಗಳು ಬದುಕಿರುತಿದ್ದಳು ಎಂದ ಸುಜಾತ ತಂದೆ ಕಣ್ಣೀರಿಟ್ಟಿದ್ದಾರೆ. ಕೋಲಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ದುರ್ಮರಣ

