ಬಳ್ಳಾರಿ: ಪೋಷಕರ ವಿರೋಧದ ನಡೆವೆಯೂ ಮದುವೆಯಾದ ಪ್ರೇಮಿಗಳು ಈಗ ರಕ್ಷಣೆ ಕೋರಿ ಬಳ್ಳಾರಿ ಪೊಲೀಸರ ಮೊರೆ ಹೋಗಿದ್ದಾರೆ.
ಉಮೇಶ್ ಹಾಗೂ ದಿವ್ಯಶ್ರೀ (ಹೆಸರು ಬದಲಾಯಿಸಲಾಗಿದೆ) ಪ್ರೀತಿಸಿ ಮದುವೆಯಾದ ಪ್ರೇಮಿಗಳು. ಬಳ್ಳಾರಿಯ ಮಿಲ್ಲರಪೇಟೆ ನಿವಾಸಿಯಾಗಿರುವ ಉಮೇಶ್, ಚಳ್ಳಕೆರೆ ಮೂಲದ ದಿವ್ಯಶ್ರೀಯನ್ನ ಮದುವೆಯಾಗಿದ್ದು, ಇದೀಗ ಪೋಷಕರ ವಿರೋಧ ಎದುರಿಸುತ್ತಿದ್ದಾರೆ. 9 ತಿಂಗಳ ಹಿಂದೆ ಬ್ಯಾಂಕಿಂಗ್ ಕೋಚಿಂಗ್‍ಗೆ ಆಗಮಿಸಿದ್ದ ದಿವ್ಯಶ್ರೀ ನೋಡಿ ಮನಸೋತಿದ್ದ ಉಮೇಶ್, ಆಕೆಯನ್ನು ಮನಸಾರೆ ಒಪ್ಪಿ ಪ್ರೀತಿ ಮಾಡಿದ್ದನು.
ಇವರಿಬ್ಬರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದರೂ ಕಳೆದ ಏಪ್ರಿಲ್ 27ರಂದು ಇಬ್ಬರೂ ಒಪ್ಪಿ ಬಳ್ಳಾರಿಯಲ್ಲಿ ಮದುವೆಯಾಗಿದ್ದಾರೆ. ಆದರೆ ಮದುವೆಯಾದ ನಂತರವೂ ಸಹ ದಿವ್ಯಶ್ರೀಯವರ ಪೋಷಕರು ಕೆಲ ರಾಜಕೀಯ ಮುಖಂಡರ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ದಂಪತಿ ಆರೋಪಿಸುತ್ತಿದ್ದಾರೆ.
ದಿವ್ಯಶ್ರೀ ಎಸ್‍ಟಿ ಸಮುದಾಯಕ್ಕೆ ಸೇರಿದವರಾಗಿದ್ದು, ಬಲಿಜ ಸಮಾಜಕ್ಕೆ ಸೇರಿರುವ ಉಮೇಶ್ ಜಾತಿ ನೋಡದೇ ಆಕೆಯನ್ನು ಮದುವೆಯಾಗಿದ್ದಾರೆ. ಆದರೆ ದಿವ್ಯಶ್ರೀ ಪೋಷಕರು ಕೆಲ ರಾಜಕೀಯ ಮುಖಂಡರ ಮೂಲಕ ಬೆದರಿಕೆ ಹಾಕಿಸುತ್ತಿದ್ದಾರೆ. ಹೀಗಾಗಿ ಪ್ರೇಮಿಗಳಿಬ್ಬರು ಇದೀಗ ರಕ್ಷಣೆ ಕೋರಿ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ. ಪ್ರೇಮಿಗಳಿಬ್ಬರಿಂದ ಮಾಹಿತಿ ಪಡೆದಿರುವ ಎಸ್‍ಪಿ ನಿಂಬರಗಿ ಸಹ ಪ್ರೇಮಿಗಳಿಗೆ ಮಹಿಳಾ ಪೊಲೀಸ್ ಠಾಣೆಯ ಮೂಲಕ ರಕ್ಷಣೆ ಕೊಡಿಸುವ ಭರವಸೆ ನೀಡಿದ್ದಾರೆ.