ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬ ಮದುವೆಯಾದ ಮೊದಲ ರಾತ್ರಿಯೇ ಪತ್ನಿಯ ಶೀಲ ಶಂಕಿಸಿ ಮರುದಿನವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವರ್ಜಿನಿಟಿ ಪರೀಕ್ಷೆ ಮಾಡಿಸಿರುವ ಘಟನೆ ನಡೆದಿದೆ.
ಪತಿಯ ಹುಚ್ಚಾಟಕ್ಕೆ ಬೇಸತ್ತ ಪತ್ನಿ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನಾರೋಗ್ಯದಿಂದ ವಾಂತಿ ಮಾಡಿದ್ದಕ್ಕೆ ಪತಿ ಅನುಮಾನಗೊಂಡಿದ್ದಾನೆ. ನಂತರ ಬೇರೆಯವರ ಜೊತೆ ನಿನಗೆ ನಂಟಿದೆ. ಹೀಗಾಗಿ ಬೇರೆಯವರಿಗೆ ಗರ್ಭಿಣಿಯಾಗಿದ್ದೀಯಾ ಎಂದು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ ಪೋಷಕರ ಜೊತೆ ಸೇರಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಏನಿದು ಘಟನೆ?
ಆರೋಪಿ ಪತಿ ಮತ್ತು ಮಹಿಳೆ ಇಬ್ಬರೂ ಎಂಬಿಎ ಪದವೀಧರರಾಗಿದ್ದು, ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಉತ್ತರ ಕರ್ನಾಟಕಕ್ಕೆ ಸೇರಿದವರಾಗಿದ್ದಾರೆ. ಇವರಿಬ್ಬರು ಮ್ಯಾಟ್ರಿಮೋನಿಯಾ ವೆಬ್ ಸೈಟ್ ಮೂಲಕ ಪರಿಚಯವಾಗಿದ್ದು, ಕೆಲವು ದಿನಗಳ ನಂತರ ಅಂದರೆ 2018 ನವೆಂಬರ್ ನಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಮದುವೆಗೆ ಇನ್ನೂ ಹದಿನೈದು ದಿನಗಳು ಇರುವಾಗಲೇ ಮಹಿಳೆ ತನ್ನ ತಾಯಿಯನ್ನು ಕಳೆದುಕೊಂಡರು. ಬಳಿಕ ಖಿನ್ನತೆಗೆ ಒಳಗಾಗಿದ್ದರು. ಇದರಿಂದ ಆಕೆಗೆ ಮದುವೆ ಇಷ್ಟವಿಲ್ಲ ಎಂದು ಶರತ್ ತಪ್ಪಾಗಿ ಅರ್ಥಮಾಡಿಕೊಂಡಿದ್ದನು.
ಬಳಿಕ ಅವರಿಬ್ಬರೂ ಮದುವೆಯೂ ನಡೆಯಿತು. ಮದುವೆಯ ನಂತರ ಮರುದಿನ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮಹಿಳೆ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣ ಶರತ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಅಲ್ಲಿ ಗರ್ಭಿಣಿಯಾಗಿದ್ದಾರಾ ಎಂದು ತಿಳಿಯಲು ಕನ್ಯತ್ವ ಪರೀಕ್ಷೆ ಮಾಡಲು ವೈದ್ಯರು ಮಹಿಳೆಯ ಬಳಿ ಸಹಿ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ತಿಳಿದು ಮಹಿಳೆ ಆಘಾತಕ್ಕೊಳಗಾಗಿದ್ದು, ಪರೀಕ್ಷೆಯ ಬಳಿಕ ಸಂತ್ರಸ್ತೆ ತನ್ನ ಸಹೋದರಿಯ ಮನೆಗೆ ಹೋಗಿದ್ದಾರೆ.
ಕೊನೆಗೆ ನೊಂದ ಮಹಿಳೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿ ಪತಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.