ಚೆನ್ನೈ: ವ್ಯಕ್ತಿಯೊಬ್ಬ ಮದುವೆಯಾದ ಮೂರು ತಿಂಗಳಲ್ಲೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ವೇಲಚಾರಿಯಲ್ಲಿ ನಡೆದಿದೆ.
ಅಂಜಲಿ (21) ಕೊಲೆಯಾದ ಪತ್ನಿ. ಆರೋಪಿ ಅಯ್ಯನರ್ (31) ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಹಲ್ಲೆ ಮಾಡಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಏನಿದು ಪ್ರಕರಣ?
ಮೃತ ಅಂಜಲಿ ಮೂರು ತಿಂಗಳ ಹಿಂದೆ ಅಯ್ಯನಾರ್ ಜೊತೆಗೆ ಮದುವೆಯಾಗಿದ್ದಳು. ಆರೋಪಿ ಅಯ್ಯನಾರ್ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಆಗಾಗ ಈ ದಂಪತಿಯ ಮಧ್ಯೆ ಜಗಳ ನಡೆಯುತ್ತಿತ್ತು. ಶುಕ್ರವಾರ ಅಯ್ಯನಾರ್ ಸಂಬಂಧಿಕರೊಬ್ಬರು ನಿಧನರಾಗಿದ್ದರು. ಅವರನ್ನು ನೋಡಲು ಹೋಗಬೇಕೆಂದು ಹೇಳಿದ್ದ. ಆದರೆ ಅಂಜಲಿ ಅಲ್ಲಿಗೆ ಬರಲು ನಿರಾಕರಿಸಿದ್ದಳು. ಈ ವಿಚಾರದ ಬಗ್ಗೆ ಇಬ್ಬರ ಮಧ್ಯೆ ಜೋರಾಗಿ ಜಗಳ ನಡೆದಿದೆ.
ಇದರಿಂದ ಕೋಪಗೊಂಡ ಆರೋಪಿ ಅಯ್ಯನರ್ ಮೊದಲು ಪತ್ನಿಯ ಕತ್ತು ಹಿಸುಕಿ, ಬಳಿಕ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಅಂಜಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ನಂತರ ಭಯಗೊಂಡ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಪಕ್ಕದ ಮನೆಯಲ್ಲೇ ಇದ್ದ ಸಂಬಂಧಿಕರು ಬಂದು ಬಾಗಿಲು ಬಡಿದಿದ್ದಾರೆ. ಆದರೆ ಅಂಜಲಿ ಬಾಗಿಲನ್ನು ತೆಗೆದಿರುವುದನ್ನು ಗಮನಿಸಿದ ಅವರು ಅಂಜಲಿ ಮತ್ತು ಅಯ್ಯನರ್ ಇಬ್ಬರಿಗೂ ಫೋನ್ ಮಾಡಿದ್ದರು. ಯಾರೂ ಕೂಡ ಫೋನ್ ರಿಸೀವ್ ಮಾಡದ ಪರಿಣಾಮ ಕೊನೆಗೆ ಮನೆಯ ಬಾಗಿಲು ಮುರಿದು ಮನೆಯೊಳಗೆ ಹೋಗಿದ್ದಾರೆ.
ಅಲ್ಲಿ ಅಂಜಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸಂಬಂಧಿಕರ ಮನೆಯಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.