ಚಿತ್ರದುರ್ಗ: ಯುವಕ ತನ್ನ ಸ್ನೇಹಿತ ಚೆನ್ನಾಗಿರಲಿ ಅಂತ ಅಪ್ರಾಪ್ತ ಬಾಲಕಿಯೊಂದಿಗೆ ಮದುವೆ ಮಾಡಿಸಿದ್ದ ಪರಿಣಾಮ ಆತನೇ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಂಡೆಹಟ್ಟಿ ಗ್ರಾಮದ ಬಳಿ ನಡೆದಿದೆ.
ಕುಮಾರ್ (21) ಮೃತ ಯುವಕ. ಮರದ ಕೊಂಬೆಯೊಂದರಲ್ಲಿ ಪಂಚೆಯಿಂದ ನೇಣುಬಿಗದ ಸ್ಥಿತಿಯಲ್ಲಿ ಕುಮಾರ್ ಮೃತದೇಹ ಪತ್ತೆಯಾಗಿತ್ತು. ಕಳೆದ 2019 ಮೇ 26 ರಂದು ಇದೇ ಗ್ರಾಮದ ಅಪ್ರಾಪ್ತನ ಜೊತೆ ಅಪ್ರಾಪ್ತೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಮದುವೆ ಮಾಡಿಸಿದ್ದನೆಂಬ ಆರೋಪ ಈತನ ಮೇಲಿತ್ತು. ಹೀಗಾಗಿ ಕುಮಾರ್ ಸೇರಿದಂತೆ 19 ಜನರ ಮೇಲೆ ಹುಡುಗಿಯ ಪೋಷಕರು ಕೇಸ್ ದಾಖಲು ಮಾಡಿದ್ದರು. ಇದರಿಂದಾಗಿ ತಪ್ಪು ಮಾಡಿದ್ದ ಈತನ ಸ್ನೇಹಿತ ಈಗಾಗಲೇ ಶಿಕ್ಷೆಗೊಳಗಾಗಿದ್ದಾನೆ. ಆದರೆ ಈತ ಮಾತ್ರ ಗ್ರಾಮದಲ್ಲಿ ಆತಂಕದಿಂದ ಬದುಕುತ್ತಿದ್ದನು.
ಪದೇ ಪದೇ ಹುಡುಗಿಯ ಕಡೆಯವರು ಕುಮಾರ್ ಗೆ ಪ್ರಾಣ ಬೆದರಿಕೆ ಹಾಕುತ್ತಿದ್ದರಂತೆ. ಆದರೆ ನಾಲ್ಕೈದು ದಿನಗಳ ಹಿಂದೆ ಕುಮಾರ್ ನಾಪತ್ತೆಯಾಗಿದ್ದ. ಶುಕ್ರವಾರ ರಾತ್ರಿ ಗ್ರಾಮದ ಹೊರವಲಯದ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶವವಾಗಿ ಪತ್ತೆಯಾಗಿದ್ದಾನೆ. ಹೀಗಾಗಿ ಮಗನ ಕಳೆದುಕೊಂಡ ತಾಯಿ ಹಾಗೂ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಮಾಡಿ ನೇಣು ಹಾಕಿದ್ದಾರೆ. ದೇಹದಲ್ಲಿ ರಕ್ತವಿದೆ. ಹಲ್ಲುಗಳಿಲ್ಲದಂತೆ ಹಲ್ಲೆ ನಡೆಸಿ ನಾಲ್ವರು ಸೇರಿಕೊಂಡು ಕೊಂದಿದ್ದಾರೆಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಚಿತ್ರದುರ್ಗ ಎಸ್‍ಪಿ ಕೂಡ ಪ್ರತಿಕ್ರಿಯಿಸಿ, ಸದ್ಯ ಈ ಕೇಸ್ ಅಸಹಜ ಸಾವು ಎಂದು ಪರಿಗಣಿಸಲಾಗಿದೆ. ಚಳ್ಳಕೆರೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ವೈದ್ಯಕೀಯ ದಾಖಲೆಗಳಲ್ಲಿ ಏನಾದರೂ ಕೊಲೆಯ ಸುಳಿವು ಕಂಡು ಬಂದಲ್ಲಿ ತಕ್ಷಣವೇ ಕುಟುಂಬಸ್ಥರ ಆರೋಪವನ್ನು ಪರಿಗಣಿಸಲಾಗುತ್ತದೆ. ನಂತರ ಸೂಕ್ತ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.