– ಮಲಗಿದ್ದಾಗಲೇ ತಂದೆ-ತಾಯಿ, ಮಗನ ಕೊಚ್ಚಿ ಕೊಂದ್ರು
ಬೆಳಗಾವಿ: ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ನಡೆದಿದೆ.
ಬೈಲಹೊಂಗಲದ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯ ಶಿವಾನಂದ ಅಂದಾನ ಶೆಟ್ಟಿ, ಪತ್ನಿ ಶಾಂತವ್ವ ಮತ್ತು ಪುತ್ರ ವಿನೋದ್ ಅಂದಾನ ಶೆಟ್ಟಿ ಮೃತ ದುರ್ದೈವಿಗಳು. ಶನಿವಾರ ರಾತ್ರಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ತಂದೆ, ಮಗ ಮತ್ತು ತಾಯಿ ಮೂವರು ಮನೆಯಲ್ಲಿ ಮಲಗಿದ್ದಾಗಲೇ ರಾತ್ರಿ ಬಂದು ಕೊಲೆ ಮಾಡಿ ಹೋಗಿದ್ದಾರೆ. ಮುಂಜಾನೆ ನೆರೆಹೊರೆಯವರು ಬಂದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಅವರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮೃತ ಶಿವಾನಂದ ಮತ್ತು ಶಾಂತವ್ವ ತಮ್ಮ ಮಗ ವಿನೋದ್ ಮದುವೆಯನ್ನು ಇದೇ ತಿಂಗಳ 30 ರಂದು ಫಿಕ್ಸ್ ಮಾಡಿದ್ದರು. ಹೀಗಾಗಿ ಕುಟುಂಬದವರು ಮದುವೆ ಸಂಭ್ರಮದಲ್ಲಿದ್ದರು. ಆದರೆ ರಾತ್ರೋರಾತ್ರಿ ಒಂದು ಕುಟುಂಬವನ್ನೇ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ದೊಡ್ಡವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹಂತಕರು ಒಂದೇ ಮನೆಯಲ್ಲಿ ಮೂರು ಜನರನ್ನ ಕೊಚ್ಚಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.