ಮುಂಬೈ: ಪ್ರೇಯಸಿಯ ತಾಯಿ ಮದುವೆಗೆ ನಿರಾಕರಿಸಿದಕ್ಕೆ ವ್ಯಕ್ತಿಯೊಬ್ಬ ಆಕೆಯ ಮನೆಗೆ ಬೆಂಕಿ ಹಚ್ಚಿದ ಘಟನೆ ಮಹಾರಾಷ್ಟ್ರದ ಉಲ್ಲಾಸ್‍ನಗರದಲ್ಲಿ ನಡೆದಿದೆ.
ಅಶೋಕ್ ವಾಘಮರೆ ಅರೆಸ್ಟ್ ಆದ ಆರೋಪಿ. ಉಲ್ಲಾಸ್‍ನಗರದ ನಿವಾಸಿಯಾಗಿರುವ ಅಶೋಕ್, ರೇಖಾ ಮಾರುತಿಯಾ ಎಂಬವಳನ್ನು ಪ್ರೀತಿಸುತ್ತಿದ್ದನು. ಅಲ್ಲದೆ ಆಕೆಯ ಮನೆಗೆ ಹೋಗಿ ತಾಯಿ ಕಮಲ್ ಅವರ ಮುಂದೆ ಮದುವೆ ಪ್ರಸ್ತಾಪಿಸಿದ್ದಾನೆ.
ಅಶೋಕ್ ನಿರುದ್ಯೋಗಿ ಆಗಿದ್ದ ಕಾರಣ ಕಮಲ್ ಅವರು ಈ ಮದುವೆಗೆ ನಿರಾಕರಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಶೋಕ್ ತನ್ನ ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ಬೆಂಕಿಯನ್ನು ನಂದಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಸುಧಾಕರ್ ಸುರಾದ್ಕರ್ ಮಾತನಾಡಿ, ಅಶೋಕ್ ಹಾಗೂ ರೇಖಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಸೋಮವಾರ ಅಶೋಕ್ ತನ್ನ ಪ್ರೇಯಸಿಯ ಮನೆಗೆ ಹೋಗಿ ರೇಖಾಳನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಆದರೆ ಕಮಲ್ ಇದಕ್ಕೆ ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ.
ಅಶೋಕ್ ನಿರುದ್ಯೋಗಿ ಆಗಿದ್ದ ಕಾರಣ ಕಮಲ್ ಈ ಮದುವೆಯನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಅಶೋಕ್, ಕಮಲ್‍ಗೆ ಬೆದರಿಕೆ ಹಾಕಿ ಬಟ್ಟೆಯ ಮೇಲೆ ಬೆಂಕಿಕಡ್ಡಿಯನ್ನು ಎಸೆದಿದ್ದಾನೆ. ತಕ್ಷಣ ಕಮಲ್ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಬಟ್ಟೆಗಳು ಸಂಪೂರ್ಣವಾಗಿ ಸುಟ್ಟು ಹೋಗಿತ್ತು ಎಂದು ಸುಧಾಕರ್ ಹೇಳಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ಕಮಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಆರೋಪಿ ಅಶೋಕ್‍ನನ್ನು ಬಂಧಿಸಿದ್ದಾರೆ.