ಮಡಿಕೇರಿ: ವಿಶ್ವವನ್ನೇ ತಲ್ಲಣಗೊಳಿಸುವಂತೆ ಮಾಡಿರುವ ಕೊರೊನಾ ಮಹಾಮಾರಿ ಮದುವೆ ಸಮಾರಂಭಗಳನ್ನು ಬಿಟ್ಟಿಲ್ಲ. ಎಲ್ಲೆಡೆ ಸೆಕ್ಷನ್ 144 ಜಾರಿ ಮಾಡಿರುವುದರಿಂದ 5 ಜನರಗಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಹೀಗಾಗಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಕೇವಲ ನಾಲ್ಕು ಜನರ ಸಮ್ಮುಖದಲ್ಲಿ ಮದುವೆ ನಡೆದಿದೆ.
ತೋರಾ ಗ್ರಾಮದ ಪ್ರಭು ಎಂಬವರು ಕೇರಳ ಮೂಲದ ವಿಧವೆಯೊಬ್ಬರೊಂದಿಗೆ ವಿರಾಜಪೇಟೆಯಲ್ಲಿ ಮದುವೆಯಾಗಿದ್ದಾರೆ. ಕೊರೊನಾ ಹರಡುವ ಆತಂಕದ ಹಿನ್ನೆಲೆಯಲ್ಲಿ ನಾಲ್ಕು ಜನರ ಸಮ್ಮುಖದಲ್ಲಿ ಸರಳವಾಗಿ ಈ ಜೋಡಿಯ ಮದುವೆ ನೆರವೇರಿದೆ.
ವರ ಪ್ರಭು ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ತೋರಾ ಗ್ರಾಮದಲ್ಲಿ ಸಂಭವಿಸಿದ್ದ ಭಾರೀ ಭೂ-ಕುಸಿತದಲ್ಲಿ ತಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಿದ್ದರು. ಹೆಂಡತಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಕಳೆದುಕೊಂಡಿದ್ದರು. ಹಲವು ದಿನಗಳ ಹುಡುಕಾಟದ ಬಳಿಕ ಹೆಂಡತಿಯ ಶವ ಮಾತ್ರ ದೊರೆತಿತ್ತು. ಆದರೆ ಇಬ್ಬರು ಮಕ್ಕಳು ಹಾಗೂ ತಾಯಿ ಮೃತದೇಹಗಳು ಮಾತ್ರ ಸಿಗಲೇ ಇಲ್ಲ. ಕೊನೆಗೆ ಒಂದು ವರ್ಷದ ಬಳಿಕ ಪ್ರಭು ಕೇರಳ ಮಹಿಳೆಯೊಬ್ಬರನ್ನು ಮದುವೆಯಾಗಿದ್ದಾರೆ.