ಗದಗ: ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಆದರೆ ಮದುವೆ ಸಂಭ್ರಮದ ಮನೆಯಲ್ಲಿ ಬೆಂಕಿ ನರ್ತನಕ್ಕೆ ಇಡೀ ಕುಟುಂಬ ಕಂಗಾಲಾಗಿ ಕಣ್ಣೀರು ಹಾಕುವ ಪರಿಸ್ಥಿತಿ ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಮಾಬುಸಾಬ್ ಪೆಂಡಾರಿ ಎಂಬವರ ಸೊಸೆ ಅಶಮತ್‍ಳನ್ನು ಮಗುವಾಗಿದ್ದಾಗಲೇ ಮನೆಗೆ ತಂದು ಮುದ್ದಾಗಿ ಸಾಕಿದ್ದರು. ಬೆಳೆದು ನಿಂತ ಸೊಸೆಗೆ ಮದುವೆ ಮಾಡಲು ಮಾಬುಸಾಬ್, ಇದೆ ಮಾರ್ಚ್ 10 ರಂದು ಮೂಹೂರ್ತ ಸಹ ನಿಶ್ಚಯ ಮಾಡಿದ್ದರು. ಆದರೆ ಬುಧವಾರ ತಡರಾತ್ರಿ ಏಕಾಏಕಿ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಮದುವೆಗೆ ಸಾಲಮಾಡಿ ತಂದ ಹಣ ಹಾಗೂ ಒಡವೆಗಳು, ಬಟ್ಟೆಗಳು ಸುಟ್ಟು ಕರಕಲಾಗಿವೆ. ಅಗ್ನಿ ದುರಂತಕ್ಕೆ ಇಡೀ ಕುಟುಂಬ ಕಂಗಾಲಾಗಿ ಕಣ್ಣೀರಿಡುವಂತೆ ಮಾಡಿದೆ ಎಂದು ಮನೆಯ ಮಾಲೀಕ ಮೆಹಬೂಬ್‍ಸಾಬ್ ಹೇಳಿದ್ದಾರೆ.
Advertisement
Advertisement
ಕಳಸಾಪುರದ ಈ ಬಡತನದ ಕುಟುಂಬ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿತ್ತು. ಸೊಸೆಯ ಮದುವೆ ಮಾಡಲು 40 ಸಾವಿರ ಮೊತ್ತದ ಬಟ್ಟೆ, ಬಂಗಾರ ಖರೀದಿ ಹಾಗೂ ಖರ್ಚು ವೆಚ್ಚಕ್ಕೆ ಇಟ್ಟಿದ್ದ 35 ಸಾವಿರ ನಗದು ಸುಟ್ಟ ಕರಕಲಾಗಿವೆ. ಇಷ್ಟೇ ಅಲ್ಲ ಮನೆಯಲ್ಲಿದ್ದ ಟಿವಿ, ಸೌಂಡ್ ಸಿಸ್ಟಮ್ ಸೇರಿ ಎಲ್ಲ ಗೃಹೋಪಯೋಗಿ ವಸ್ತುಗಳು ಬೆಂಕಿಯಲ್ಲಿ ಭಸ್ಮವಾಗಿವೆ. ಬೆಂಕಿ ನಂದಿಸಲು ಗ್ರಾಮಸ್ಥರು ಸಾಕಷ್ಟು ಪ್ರಯತ್ನ ಮಾಡಿದರೂ ಯಾವ ಪ್ರಯೋಜವಾಗಲಿಲ್ಲ. ಆಗ ಮನೆಯಲ್ಲಿ ಮಲಗಿದ್ದ ಮಹಿಳೆ ಫಾತೀಮಾ ಕಾಲಿಗೆ ಬೆಂಕಿ ತಗುಲಿದೆ. ಅದೃಷ್ಟವಶಾತ್ ಮನೆಯಿಂದ ಎಳೆದು ಹೊರತರಲಾಗಿದೆ ಎಂದು ಸ್ಥಳೀಯ ನಜೀರ್‍ಸಾಬ್ ತಿಳಿಸಿದ್ದಾರೆ.
Advertisement
Advertisement
ಸದ್ಯಕ್ಕೆ ಫಾತೀಮಾ ಕಾಲಿಗೆ ಬೆಂಕಿ ತಗುಲಿ ಗಂಭೀರ ಗಾಯವಾಗಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿ ಅವಘಡದಲ್ಲಿ ಎಲ್ಲವೂ ಕಳೆದುಕೊಂಡು ಕುಟುಂಬದ ಸದಸ್ಯರು ಕಂಗಾಲಾಗಿದ್ದಾರೆ. ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv