– ಪತಿ, ಅತ್ತೆ ಮನೆ ಬಿಟ್ಟು ಪರಾರಿ
ಮಂಡ್ಯ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ನಡೆದಿದೆ.
ನಂದಿನಿ (32) ಮೃತ ಗೃಹಿಣಿ. ವರದಕ್ಷಿಣೆಗಾಗಿ ಪತಿ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೆಆರ್ ಪೇಟೆ ತಾಲೂಕಿನ ವಸಂತಪುರ ಗ್ರಾಮದ ಶಿವಣ್ಣರ ಮಗಳಾದ ನಂದಿನಿಯನ್ನು ಕಿಕ್ಕೇರಿ ಗ್ರಾಮ ನಿವಾಸಿ ವಿನಯ್ ಜೊತೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು.
ಮದುವೆ ವೇಳೆ ಕಾಲು ಕೆಜಿ ಚಿನ್ನ ಮತ್ತು ಒಂದು ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ವಿವಾಹದ ಬಳಿಕ ನಂದಿನಿ ಮತ್ತು ವಿನಯ್ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕೆಲವು ತಿಂಗಳ ಹಿಂದೆ ದಂಪತಿ ಕಿಕ್ಕೇರಿಗೆ ಬಂದು ನೆಲೆಸಿದ್ದರು.
ದಂಪತಿಯ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಶನಿವಾರ ನಂದಿನಿ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪತಿ ವಿನಯ್, ಅವರ ತಾಯಿ, ಪತಿಯ ಸಹೋದರರು ಮನೆ ಬಿಟ್ಟು ಪರಾರಿಯಾಗಿದ್ದರು.
ಮಗಳ ಸಾವಿನ ವಿಚಾರ ತಿಳಿದ ನಂದಿನಿ ಪೋಷಕರು ಮನೆಯ ಬಳಿ ಬಂದು ಗಲಾಟೆಯನ್ನು ಮಾಡಿದ್ದರು. ಅಲದೇ ವರದಕ್ಷಿಣೆಗಾಗಿ ಪತಿ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆಯನ್ನು ಕೈಗೊಂಡಿದ್ದಾರೆ.