ಚಿಕ್ಕಬಳ್ಳಾಪುರ: ಮದುವೆಯಲ್ಲಿ ಊಟ ಕಡಿಮೆ ಆಯ್ತು ಎಂದು ಮದುವೆ ಮುರಿದು ಬಿದ್ದ ಘಟನೆ ಈ ಹಿಂದೆ ನಡೆದಿತ್ತು. ಆದರೆ ವಧುವಿನ ಮೊಗ್ಗಿನ ಜಡೆ ಸರಿಯಾಗಿಲ್ಲ ಎಂಬ ಕ್ಷುಲಕ ಕಾರಣಕ್ಕೆ ವಿವಾಹವೇ ಮುರಿದು ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಭೀಮಾಕನಹಳ್ಳಿಯಲ್ಲಿ ಗುರುವಾರದಂದು ನಡೆದಿದೆ.
Advertisement
ರಾತ್ರಿ ನಡೆದ ಆರಕ್ಷತೆಯಲ್ಲಿ ಪಾಲ್ಗೊಂಡು ಮುಂಜಾನೆ ಮಹೂರ್ತಕ್ಕೆ ಕೈ ಕೊಟ್ಟು ವಧುವಿನ ಜೊತೆಗೆ ಕುಟುಂಬದವರು ಕೂಡ ಪರಾರಿಯಾಗಿದ್ದಾರೆ. ಹೊಸಕೋಟೆ ತಾಲೂಕು ಭೀಮಾಪುರ ಗ್ರಾಮದ ಯುವಕನೊಂದಿಗೆ ವಿಜಯಪುರ ಯುವತಿಯ ಮದುವೆ ನಿಶ್ಚಯವಾಗಿತ್ತು. ಇವರ ಮದುವೆಗೆ ಹೊಸಕೋಟೆಯ ಭೀಮಾಕನಹಳ್ಳಿಯ ಗುಂಡಾಂಜನೇಯಸ್ವಾಮಿ ದೇವಾಲಯದ ಬಳಿ ಇರುವ ನವ ಕೋಟಿ ನಾರಾಯಣ ಕಲ್ಯಾಣ ಮಂಟಪದಲ್ಲಿ ಗುರುವಾರ ಮುಹೂರ್ತ ನಿಗದಿಯಾಗಿತ್ತು.
Advertisement
Advertisement
ಬುಧವಾರ ರಾತ್ರಿ ಆರತಕ್ಷತೆ ನೆರವೇರಿದ್ದು, ಬೆಳಗ್ಗೆ ಐದು ಗಂಟೆಗೆ ಮುಹೂರ್ತ ನಿಗದಿಯಾಗಿತ್ತು. ಆದರೆ ವರನ ಕಡೆಯವರು ಮೊಗ್ಗಿನ ಜಡೆ ಸರಿ ಇಲ್ಲ, ಬೇರೆ ಬೇರೆ ಹೂಗಳನ್ನು ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು ಎನ್ನಲಾಗಿದೆ. ಈ ನಡುವೆ ಇದಕ್ಕಿದಂತೆ ವಧುವಿನ ಕಡೆಯವರು ವಧುವಿನೊಂದಿಗೆ ಕಾರಿನಲ್ಲಿ ಹೊರಟುಹೋಗಿದ್ದಾರೆ. ಇವರ ಕಡೆಯಿಂದ ಬಂದಿದ್ದ ಕುಟುಂಬಸ್ಥರು, ನೆಂಟರು, ಹಿತೈಷಿಗಳು ಕೂಡ ಮದುವೆ ಮಂಟಪದಿಂದ ಹೊರಟಿದ್ದಾರೆ.
Advertisement
ಇತ್ತ ಘಟನೆಯಿಂದ ವಿಚಲಿತರಾದ ವರನಿಗೆ ಅದೇ ಕಲ್ಯಾಣ ಮಂಟಪದಲ್ಲಿ ಬೇರೊಂದು ಹುಡುಗಿಯ ಜೊತೆ ಮದುವೆ ಮಾಡಲು ಹುಡುಗಿಗಾಗಿ ಹುಡುಕಾಟ ಕೂಡ ನಡೆಸಿದ್ದಾರೆ. ಆದರೆ ಹುಡುಗಿ ಪರಾರಿಯಾದ ತಕ್ಷಣ ಸಂಭ್ರಮದಲ್ಲಿದ್ದ ಕಲ್ಯಾಣ ಮಂಟಪದಲ್ಲಿ ಮೌನ ಆವರಿಸಿಕೊಂಡಿತ್ತು. ಮುಂದೇನು ಮಾಡಬೇಕೆಂದು ತಿಳಿಯದೆ ಕುಟುಂಬಸ್ಥರು ದಿಕ್ಕು ತೋಚದಂತೆ ಕುಳಿತಿದ್ದಾರೆ.