ಭೋಪಾಲ್: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗಡ್ಡ ಬಿಟ್ಟು ಮದುವೆಯಾದಾಗ ನಾನೇಕೆ ಮದುವೆಯಾಗಬಾರದು ಎಂದು ವರ ಹೇಳಿದ್ದಕ್ಕೆ ಮದುವೆ ಮನೆಯಲ್ಲಿ ಹೈಡ್ರಾಮಾ ನಡೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಭೋಪಾಲ್‍ನಿಂದ 270 ಕಿ.ಮೀ ದೂರದಲ್ಲಿರುವ ಖಾಂಡ್ವಾ ಜಿಲ್ಲೆಯ ಅಜಂತಿ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ವಾದ-ವಿವಾದ ನಡೆದಿದ್ದು, ಮಂಗಳವಾರ ಬೆಳಗಿನ ಜಾವದವರೆಗೂ ನಡೆದಿದೆ.
Advertisement
ಮಂಗಲ್ ಚೌಹಾಣ್ ತನ್ನ ಮದುವೆಗೆ ಸಿದ್ಧರಾಗಿ ಬಂಧುಗಳ ಜೊತೆ ಮೆರವಣಿಗೆ ಮೂಲಕ ಮದುವೆ ಮಂಟಪಕ್ಕೆ ಬಂದಿದ್ದಾರೆ. ಆಗ ವಧುವಿನ ತಂದೆ ರಾಧೇಶ್ಯಾಮ್ ಜಾಧವ್ ವರ ಹಾಗೂ ಅವರ ಸಂಬಂಧಿಕರನ್ನು ಸ್ವಾಗತಿಸಲೆಂದು ಹೋದಾಗ ಮಂಗಲ್ ಚೌಹಾನ್ ಗಡ್ಡ ಬಿಟ್ಟಿರುವುದನ್ನು ಗಮನಿಸಿದ್ದಾರೆ.
Advertisement
ಮದುವೆಯ ಮಾತುಕತೆ ವೇಳೆ ನೀನು ಗಡ್ಡ ಬಿಟ್ಟಿರಲಿಲ್ಲ. ಆದರೆ ಈಗ ಗಡ್ಡ ಬಿಟ್ಟಿದ್ದೀಯ. ನೀನು ಶೇವ್ ಮಾಡಿಕೊಂಡು ಬರುವವರೆಗೂ ನನ್ನ ಮಗಳು ರೂಪಾಲಿಯನ್ನು ನಿನಗೆ ಕೊಟ್ಟು ಮದುವೆ ಮಾಡಿಸಿಕೊಡುವುದಿಲ್ಲ ಎಂದು ವಧುವಿನ ತಂದೆ ರಾಧೇಶ್ಯಾಮ್ ಹಠ ಹಿಡಿದಿದ್ದಾರೆ.
Advertisement
Advertisement
ವಧುವಿನ ತಂದೆಯ ಹಠಕ್ಕೆ ವರ ಮಂಗಲ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ಗಡ್ಡ ಬಿಟ್ಟುಕೊಂಡು ಅನುಷ್ಕಾ ಶರ್ಮಾ ಜೊತೆ ಮದುವೆಯಾದಾಗ ನಾನು ಯಾಕೆ ಗಡ್ಡ ಬಿಟ್ಟುಕೊಂಡು ಮದುವೆಯಾಗಬಾರದು ಎಂದು ಪ್ರಶ್ನಿಸಿ ವರ ತನ್ನ ವಾದವನ್ನು ಮಂಡಿಸಿದ್ದಾನೆ.
ವಧುವಿನ ತಂದೆ ಹಾಗೂ ವರನ ಮಧ್ಯೆ ಗಡ್ಡದ ವಿಷಯಕ್ಕೆ ರಾತ್ರಿಯಿಡಿ ವಾದ-ವಿವಾದ ನಡೆದರೂ ಅವರ ಸಮಸ್ಯೆ ಬಗೆಹರಿಯಲಿಲ್ಲ. ಆಗ ವರನ ಸಂಬಂಧಿಕರು ನೀವು ಈ ರೀತಿ ವಾದ ಮಾಡಿದರೆ ನಮಗೆ ಈ ಮದುವೆ ಬೇಡ ಎಂದು ಹೇಳಿ ಎಚ್ಚರಿಕೆ ನೀಡಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ವಧುವಿನ ಸಂಬಂಧಿಕರೊಬ್ಬರು ಮೊಗತ್ ರೋಡ್ ಪೊಲೀಸ್ ಠಾಣೆಯ ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ, ಗಡ್ಡ ಬಿಡುವುದು ಈಗಿನ ಕಾಲದ ಫ್ಯಾಷನ್ ಎಂದು ರಾಧೇಶ್ಯಾಮ್ ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಪೊಲೀಸರು ಹೇಳಿದರೂ ರಾಧೇಶ್ಯಾಮ್ ಮಾತ್ರ ತನ್ನ ಹಠವನ್ನು ಬಿಡಲೇ ಇಲ್ಲ. ಕೊನೆಗೆ ವರ ಮಂಗಲ್ ನನ್ನು ಪೊಲೀಸರು ಮನವೊಲಿಸಿ ಶೇವ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಬಗ್ಗೆ ವರ ಅಥವಾ ವಧುವಿನ ಕಡೆಯವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ವರದಿಯಾಗಿದೆ.