ನವದೆಹಲಿ: ಕೋಲಾರ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ ಮಾರ್ಕಂಡೇಯ ಜಲಾಶಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ಗೆ ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಇದೊಂದು ಶುದ್ಧ ಕುಡಿಯುವ ನೀರಿನ ಯೋಜನೆಯಾಗಿರುವ ಹಿನ್ನೆಲೆ ಯೋಜನೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ದಕ್ಷಿಣ ಪೆನ್ನಾರ್ ನದಿ ಕಣಿವೆ ವ್ಯಾಪ್ತಿಯ ಕೋಲಾರ ಜಿಲ್ಲೆಯ ಯರಗೋಳ ಗ್ರಾಮದ ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ರಾಜ್ಯ ಸರ್ಕಾರ ಜಲಾಶಯ ನಿರ್ಮಾಣ ಮಾಡುತ್ತಿದೆ. ಇದರಿಂದ ಪೆನ್ನಾರ್ ನದಿ ನೈಸರ್ಗಿಕ ನೀರಿನ ಹರಿವು ತಡೆಯಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂನಲ್ಲಿ ತಮಿಳುನಾಡು ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಪೀಠ ಯೋಜನೆಯ ಸಂಬಂಧ ಅಫಿಡವಿಟ್ ಸಲ್ಲಿಸಲು ಸೂಚನೆ ನೀಡಿತ್ತು.
Advertisement
Advertisement
ಈ ಸಂಬಂಧ ಅಫಿಡವಿಟ್ ಸಲ್ಲಿಸಿರುವ ರಾಜ್ಯ ಸರ್ಕಾರ, ಯೋಜನೆಯಿಂದ ಪೆನ್ನಾರ್ ನದಿಯ ನೈಸನರ್ಗಿಕ ಹರಿವಿಗೆ ತೊಂದರೆಯಾಗುವುದಿಲ್ಲ, ಮಾರ್ಕಂಡೇಯ ಜಲಾಶಯ ಶುದ್ಧ ಕುಡಿಯುವ ನೀರಿನ ಯೋಜನೆ ಇದನ್ನು ಕೃಷಿಗೆ ಬಳಕೆ ಮಾಡಿಕೊಳ್ಳುತ್ತಿಲ್ಲ. ಕೋಲಾರ, ಬಂಗಾರಪೇಟೆ, ಮಾಲೂರು ಸೇರಿ 45 ಹಳ್ಳಿಗಳ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದ್ದು, ಮೆಗ್ನೀಷಿಯಂ ಸೇರಿ ಇತರೆ ಖನಿಜಾಂಶಗಳಿಂದ ಅಂತರ್ಜಲ ಮಲೀನವಾಗಿರುವ ಪ್ರದೇಶಕ್ಕೆ ಕುಡಿಯುವ ನೀರು ನೀಡಲು ಉದ್ದೇಶಿಸಿದೆ ಎಂದು ಸ್ಪಷ್ಟನೆ ನೀಡಿದೆ.
Advertisement
Advertisement
ಮಾರ್ಕೇಂಡೇಯ ಜಲಾಶಯ ಯೋಜನೆ 240 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗ್ತಿದೆ ಈಗಾಗಲೇ 210 ಕೋಟಿ ಖರ್ಚು ಮಾಡಿದ್ದು ಶೇ.85 ಕಾಮಗಾರಿ ಮುಗಿದಿದೆ ಈ ಹಂತದಲ್ಲಿ ಯೋಜನೆಗೆ ತಡೆ ನೀಡಿದ್ರೆ ಹಣ ಎಲ್ಲ ವ್ಯರ್ಥವಾಗಲಿದೆ. ಪೆನ್ನಾರ್ ನದಿಗೆ ತೊಂದರೆ ಆಗುವುದಿಲ್ಲ ಎಂಬುದು ಸ್ಪಷ್ಟವಾಗಿದ್ದು ತಮಿಳುನಾಡು ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ ಯೋಜನೆಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಬೇಕು ಎಂದು ಅಫಿಡವಿಟ್‍ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.