-17 ಪುಟದ ಡೆತ್ ನೋಟ್
-ಬ್ರೇಕಪ್ ಬಳಿಕ ಮದ್ವೆಗೆ ಸಿದ್ಧವಾಗಿದ್ದ ಪ್ರಿಯಕರ
ಬೆಂಗಳೂರು: ಮಂಗಳವಾರ ಮಾರತ್ತಹಳ್ಳಿ ಪಿಜಿ ಬಳಿ ಯುವತಿ ಮೇಲೆ ಗುಂಡು ಹಾರಿಸಿದ್ದ ಪ್ರಕರಣ ತಿರುವು ಪಡೆದುಕೊಂಡಿದೆ. ಯುವತಿ ಶುಭಶ್ರೀ ಪ್ರಿಯದರ್ಶಿನಿಯ ಮಾಜಿ ಪ್ರಿಯಕರ ಅಮರೇಂದ್ರ ಪಟ್ನನಾಯಕ್ ಗುಂಡು ಹಾರಿಸಿ, ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಓಡಿಶಾ ಮೂಲದ ಶುಭಶ್ರೀ ಪ್ರಿಯದರ್ಶಿನಿ ಕಳೆದ ಎರಡು ವರ್ಷಗಳಿಂದ ನಿಮ್ಹಾನ್ಸ್ ನಲ್ಲಿ ಕೆಲಸ ಮಾಡಿಕೊಂಡು, ಪಿಜಿಯಲ್ಲಿ ವಾಸವಾಗಿದ್ದರು. ಆರೋಪಿ ಅಮರೇಂದ್ರ ಪಟ್ನನಾಯಕ್ ಮತ್ತು ಶುಭಶ್ರೀ ಇಬ್ಬರೂ ಎರಡು ವರ್ಷದಿಂದ ಪ್ರೀತಿಯಲ್ಲಿದ್ದರು. ಹೈದರಾಬಾದ್ ನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಅಮರೇಂದ್ರ ಬ್ರೇಕಪ್ ಮಾಡಿಕೊಂಡು ಬೇರೆ ಯುವತಿ ಜೊತೆ ಮದುವೆಗೆ ಸಿದ್ಧವಾಗಿದ್ದನು. ಅಮರೇಂದ್ರ ಮದುವೆ ಆಗುತ್ತಿದ್ದ ಯುವತಿಗೆ ಇಬ್ಬರ ಕೆಲ ಫೋಟೋಗಳನ್ನು ಶುಭಶ್ರೀ ಕಳಿಸಿದ್ದಳು. ಫೋಟೋಗಳಿಂದಾಗಿ ಅಮರೇಂದ್ರ ಮದುವೆ ಕ್ಯಾನ್ಸಲ್ ಆಗಿತ್ತು.
ಮದುವೆ ನಿಂತಿದ್ದರಿಂದ ಕೋಪಗೊಂಡ ಅಮರೇಂದ್ರ ಹೈದರಾಬಾದ್ ನಿಂದ ಶುಭಶ್ರೀಯನ್ನು ಕೊಲ್ಲಲು ಬೆಂಗಳೂರಿಗೆ ಬಂದಿದ್ದನು. ಮಾರತ್ತಹಳ್ಳಿಯ ಮಂಜುನಾಥ್ ಲೇಔಟ್ ಬಳಿಯನ ಲೇಡಿಸ್ ಬಳಿ ನಿಂತಿದ್ದ ಮಾಜಿ ಪ್ರೇಯಸಿ ಶುಭಶ್ರೀಗೆ ಗುಂಡು ಹೊಡೆದಿದ್ದಾನೆ. ಶುಭಶ್ರೀಗೆ ಗುಂಡು ತಾಗುತ್ತಿದ್ದಂತೆ ಭಯಗೊಂಡ ಅಮರೇಂದ್ರ ಸ್ಥಳದಲ್ಲಿಯೇ ಗನ್ ಎಸೆದು ಪರಾರಿಯಾಗಿದ್ದನು. ಇತ್ತ ಶುಭಶ್ರೀಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆತ್ಮಹತ್ಯೆಯೋ? ಅಪಘಾತವೋ?
ಇತ್ತ ಕೆಲವೇ ಸಮಯದಲ್ಲಿ ಅಮರೇಂದ್ರ ಬೈಕ್ ಅಪಘಾತವಾದ ರೀತಿಯಲ್ಲಿ ಸಿಕ್ಕಿದೆ. ಘಟನೆಯಲ್ಲಿ ಅಮರೇಂದ್ರ ಕತ್ತು ಸೇರಿದಂತೆ ಹಲವೆಡೆ ಗಾಯವಾಗಿತ್ತು. ಘಟನಾ ಸ್ಥಳದಲ್ಲಿ ಡೈರಿ ಪತ್ತೆಯಾಗಿದೆ. ಡೈರಿಯ ಸುಮಾರು 17 ಪುಟಗಳಲ್ಲಿ ಅಮರೇಂದ್ರ ಡೆತ್ ನೋಟ್ ಬರೆದಿದ್ದಾನೆ. ಡೆತ್ ನೋಟ್ ಕೊನೆಗೆ ಮಾಜಿ ಗೆಳತಿ ಶುಭಶ್ರೀಗೆ ಒಳ್ಳೆಯದಾಗಲಿ ಎಂದು ಬರೆದಿದ್ದಾನೆ. ಡೆತ್ ನೋಟ್ ಬಳಿಕ ಅಮರೇಂದ್ರನೇ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಗಾಯಗೊಂಡಿರುವ ಅಮರೇಂದ್ರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾನೆ. ಇಬ್ಬರನ್ನು ಒಂದೇ ಆಸ್ಪತ್ರೆಗೆ ದಾಖಲಿಸಿದ್ದು, ಶುಭಶ್ರೀ ಚೇತರಿಸಿಕೊಂಡಿದ್ದಾರೆ. ಇಬ್ಬರು ಓಡಿಶಾ ಮೂಲದವರಾಗಿದ್ದರಿಂದ ಪ್ರೀತಿಯಲ್ಲಿದ್ದರು. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.