Connect with us

Chamarajanagar

ಸಾವಿನ ಪ್ರಸಾದಕ್ಕೆ ತಮಿಳುನಾಡು ನಂಟು- ಆದಾಯ ಬರ್ತಿದ್ದನ್ನು ಕಂಡು ದ್ವೇಷಕ್ಕೆ ವಿಷಪ್ರಾಶನ..?

Published

on

ಚಾಮರಾಜನಗರ: ದೇವರ ಪ್ರಸಾದಕ್ಕೆ ವಿಷ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ದೇವಾಲಯದ ನಂಟಿದೆ. ಮಾರಮ್ಮ ದೇವಾಲಯಕ್ಕೆ ಬರುತ್ತಿದ್ದ ಆದಾಯವನ್ನು ಕಂಡು ದ್ವೇಷದಿಂದ ವಿಷಪ್ರಾಶನ ಮಾಡಲಾಗಿದೆ ಎಂದು ಪೊಲೀಸರ ವಶದಲ್ಲಿರುವ ಶಂಕಿತ ಆರೋಪಿ ಚಿನ್ನಪ್ಪ ಪುತ್ರ ಲೋಕೇಶ್ ಆರೋಪಿಸಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಲೋಕೇಶ್, ತಮಿಳುನಾಡಿನ ಬ್ರಹ್ಮೇಶ್ವರಿ ದೇವಾಲಯದ ಕಾಳಪ್ಪನವರಿಗೂ ನಮ್ಮ ತಂದೆಗೂ ಆಗುತ್ತಿರಲಿಲ್ಲ. ಮೊದಲು ತಮಿಳುನಾಡಿನ ಅರ್ಚಕರು ದೇವಾಲಯದ ಪೂಜೆ ಮಾಡುತ್ತಿದ್ದರು. ಆದರೆ ಸರಿಯಾದ ರೀತಿಯಲ್ಲಿ ಪೂಜೆ ಮಾಡದ ಕಾರಣ ದೇವಾಲಯದ ಟ್ರಸ್ಟಿ ಆಗಿದ್ದ ನಮ್ಮ ತಂದೆ ಹಾಗೂ ಗ್ರಾಮಸ್ಥರು ಜವಾಬ್ದಾರಿಯನ್ನು ವಹಿಸಿಕೊಂಡರು. ಇದರಿಂದ ಅವರಿಗೆ ದೇವಾಲಯ ಕೈ ತಪ್ಪಿತ್ತು. ಈ ಹಿಂದೆ ಕೂಡ ಸುಮಾರು 1 ಸಾವಿರ ಜನ ಗ್ರಾಮಕ್ಕೆ ಆಗಮಿಸಿ ಜಗಳ ಮಾಡಿದ್ದರು. ಆದರೆ ನಮ್ಮ ಗ್ರಾಮಸ್ಥರು ಊರಿನ ದೇವಾಲಯ ಎಂದು ಅವರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಹಿಂದಿರುಗಿದ್ದರು ಎಂದು ತಿಳಿಸಿದರು.

Advertisement
Continue Reading Below

ನಮ್ಮ ತಂದೆ ಚಿನ್ನಪ್ಪ ದೇವಾಲಯದ ಜವಾಬ್ದಾರಿ ವಹಿಸಿದ್ದರು, ದೇವಾಲಯವನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಮಾಡಲಾಯಿತು. ಇದರಿಂದ ದೇವಾಲಯದ ಆದಾಯದ ಹೆಚ್ಚಾಗುವ ನಿರೀಕ್ಷೆ ಇತ್ತು. ಇದನ್ನು ಸಹಿಸಲಾದ ಮಂದಿ ಈಗ ನಮ್ಮನ್ನು ಕೊಲೆ ಮಾಡಲು ಈ ರೀತಿ ಪ್ಲಾನ್ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ದೇವರ ಪ್ರಸಾದವನ್ನು ಭಕ್ತರಿಗೆ ನೀಡಲು ಮಾಡಿರಲಿಲ್ಲ. ಕೇವಲ ನಮಗಾಗಿ ಸಣ್ಣ ಪ್ರಮಾಣದಲ್ಲಿ ಮಾಡಲಾಗಿತ್ತು. ಆದರೆ ಓಂ ಶಕ್ತಿ ಭಕ್ತರು ಬೇರೆ ದೇವಾಲಯಕ್ಕೆ ಹೋಗುವ ಹಿನ್ನೆಲೆಯಲ್ಲಿ ಪ್ರಸಾದ ಕೇಳಿದ್ದರು. ಆದ್ದರಿಂದಲೇ ನಮಗೆ ಮಾಡಿದ್ದ ಪ್ರಸಾದ ಅವರಿಗೆ ನೀಡಲಾಯಿತು ಎಂದು ಸ್ಪಷ್ಟನೆ ನೀಡಿದರು.

ಒಂದೊಮ್ಮೆ ಭಕ್ತರು ಪ್ರಸಾದ ಸೇವನೆ ಮಾಡದೇ ಇದ್ದಿದ್ದರೆ ದೇವಾಲಯದ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಮಾತ್ರ ಪ್ರಸಾದ ಸೇವಿಸಿ ಸಾವನ್ನಪ್ಪುತ್ತಿದ್ದರು. ಆದರೆ ಈ ಕುತಂತ್ರಕ್ಕೆ ಭಕ್ತರು ಬಲಿಯಾಗಿದ್ದಾರೆ. ಈ ಹಿಂದೆ ಗ್ರಾಮಕ್ಕೆ ಬಂದ ವೇಳೆಯೂ ನಮಗೇ ದೇವಾಲಯ ನೀಡಬೇಕು ಎಂದು ತಮಿಳುನಾಡು ದೇವಾಲಯದ ಮಂದಿ ಎಚ್ಚರಿಕೆ ನೀಡಿದ್ದರು. ಆಗ ಹಿರಿಯರ ಸಮ್ಮುಖದಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದ್ರೆ ಈ ರೀತಿ ನಮ್ಮ ಮೇಲೆ ದ್ವೇಷ ಸಾಧಿಸುತ್ತಾರೆ ಎಂಬ ಊಹೆಯೂ ನಮಗೆ ಇಲ್ಲ. ಪ್ರಸಾದ ತಯಾರು ಮಾಡಿದ ಅರ್ಚಕರ ಅಂಗವಿಕಲ ಪುತ್ರಿ, ನಮ್ಮ ಸಂಬಂಧಿಯೊಬ್ಬರು ಕೂಡ ಮೃತ ಪಟ್ಟಿದ್ದಾರೆ. ಪ್ರಸಾದ ತಯಾರು ಮಾಡಿದವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಆದರೆ ಪೊಲೀಸ್ ಠಾಣೆಯಲ್ಲೇ ಅವರು ಕೂಡ ವಾಂತಿ ಮಾಡಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

ದೇವಾಲಯದ ಅಭಿವೃದ್ಧಿ ಮಾಡಿದ ಹಿನ್ನೆಲೆಯಲ್ಲಿ ದೇವಿ ಮಾರಮ್ಮ ನಮ್ಮ ರಕ್ಷಣೆ ಮಾಡಿದೆ. ಆದರೆ ಭಕ್ತರು ಬಂದು ಆಹಾರ ಕೇಳದಿದ್ದರೆ ನಾವು, ನಮ್ಮ ಗ್ರಾಮಸ್ಥರು ಸಾವನ್ನಪ್ಪುತ್ತಿದ್ದೆವು. ಸದ್ಯ ನಮ್ಮ ತಂದೆ ಪೊಲೀಸರ ವಶದಲ್ಲಿ ಇದ್ದು, ನಮಗೆ ಮಾತನಾಡಲು ಅವಕಾಶ ನೀಡಿಲ್ಲ. ಆದರೆ ಪೊಲೀಸರೇ ನಮಗೆ ಕರೆ ಮಾಡಿ ಬಂಧನ ಮಾಡಬೇಕೆಂದು ಹೇಳಿದ್ದರು. ಆದರೆ ನಾನೇ ಪೊಲೀಸರಿಗೆ ಮಾಹಿತಿ ನೀಡಿ ನೇರ ಠಾಣೆಗೆ ಬರುವುದಾಗಿ ತಿಳಿಸಿ ಕಳುಹಿಸಿದ್ದೇವೆ. ಅಲ್ಲದೇ ದೇವಾಲಯದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅವರ ಕಡೆಯವರು ಯಾರು ಬಂದ ಹಾಗೇ ಕಾಣಲಿಲ್ಲ. ದೇವಾಲಯದ ಪೂಜೆ ಕಾರ್ಯ ನಡೆದ ಕಾರಣ ಈ ಕುರಿತು ಹೆಚ್ಚಿನ ಗಮನಹರಿಸಲು ಸಾಧ್ಯವಾಗಿಲ್ಲ. ಈ ಕುರಿತು ತನಿಖೆ ನಡೆಸಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.

https://www.youtube.com/watch?v=pU5B9V-A7NA

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *