ಕೆಪಿ ನಾಗರಾಜ್
ಮೈಸೂರು: ದೇವರ ಪ್ರಸಾದದಲ್ಲಿ ವಿಷ ಬೆರತಿರುವುದರಿಂದ ಈ ದುರಂತ ಸಂಭವಿಸಿರಬಹುದು ಎಂದು ಕೆ.ಆರ್.ಆಸ್ಪತ್ರೆಯ ವೈದ್ಯರಾದ ರಾಜೇಶ್ ಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಇದೂವರೆಗೂ ಕೆಆರ್ ಆಸ್ಪತ್ರೆಯಲ್ಲಿ ಒಟ್ಟು 25 ಮಂದಿ ದಾಖಲಾಗಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣಗಳಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಅವರ ಯಾರೆಂಬ ಮಾಹಿತಿ ಲಭಿಸಿಲ್ಲ. ಅಸ್ವಸ್ಥರಾಗಿರುವವರೆಲ್ಲಾ ಉಸಿರಾಡಲೂ ಸಹ ಕಷ್ಟ ಪಡುತ್ತಿದ್ದಾರೆ. ಹೀಗಾಗಿ 10 ಜನಕ್ಕೆ ವೆಂಟಿಲೇಟರ್ ಮೂಲಕ ಉಸಿರಾಟದ ವ್ಯವಸ್ಥೆಯನ್ನು ನೀಡಿದ್ದೇವೆ ಎಂದು ತಿಳಿಸಿದರು.
ಘಟನೆ ತಿಳಿಯುತ್ತಿದ್ದಂತೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ರವಾನಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಈಗಾಗಲೇ ಮೈಸೂರಿನ ಎಲ್ಲಾ ಪ್ರಮುಖ ಖಾಸಗಿ ಆಸ್ಪತ್ರೆಗಳ ಬಳಿ ಮಾತನಾಡಿದ್ದು, ಎಲ್ಲಾ ಆಸ್ಪತ್ರೆಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಒಂದು ವೇಳೆ ಯಾರಿಗಾದರೂ ಅಗತ್ಯಬಿದ್ದಲ್ಲಿ ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ರವಾನಿಸುತ್ತೇವೆ ಎಂದು ಹೇಳಿದರು.
ಅಸ್ವಸ್ಥರ ಗುಣಲಕ್ಷಣಗಳನ್ನು ನೋಡಿದರೇ, ಆಹಾರದಲ್ಲಿ ಕೀಟನಾಶಕ ಬೆರೆತಿರುವ ಸಂಶಯ ವ್ಯಕ್ತವಾಗುತ್ತಿದೆ. ಜಮೀನುಗಳಲ್ಲಿ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಇರಬಹುದೆಂದು ಅಂದಾಜಿಸಲಾಗಿದೆ. ಆದರೆ ಈ ಬಗ್ಗೆ ನಿಖರವಾಗಿ ಈಗ ಹೇಳಲು ಸಾಧ್ಯವಾಗುವುದಿಲ್ಲ. ರೋಗಿಗಳ ರಕ್ತ, ವಾಂತಿ ಹಾಗೂ ಆಹಾರದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟು ವರದಿ ಬಂದ ಬಳಿಕ ಘಟನೆಗೆ ನಿಖರ ಕಾರಣವನ್ನು ಹೇಳಬಹುದೆಂದು ಹೇಳಿದ್ದಾರೆ.
ನಡೆದಿದ್ದು ಏನು?
ಸುಲ್ವಾಡಿ ಗ್ರಾಮದ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದಲ್ಲಿ ಗೋಪುರದ ಶಂಕುಸ್ಥಾಪನೆ ಇಂದು ನಡೆದಿತ್ತು. ಈ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್‍ಬಾತ್ ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ರೈಸ್‍ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದಾರೆ. ಇದನ್ನು ನೋಡಿದ ಸ್ಥಳೀಯರೊಬ್ಬರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಆಂಬುಲೆನ್ಸ್ ನಲ್ಲಿ ಅಸ್ವಸ್ಥಗೊಂಡ ಜನರನ್ನು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇವಸ್ಥಾನದ ಅರ್ಚಕ, ಪುಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ 80ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಘಟನೆಯಲ್ಲಿ ಈವರೆಗೂ 10 ಮಂದಿ ಮೃತಪಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv