ವಿಶಾಖಪಟ್ಟಣ: ಆಂಧ್ರ ಪ್ರದೇಶದ (Andhra Pradesh) ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮಾರೆಡುಮಿಲ್ಲಿಯ ಅರಣ್ಯ ಪ್ರದೇಶದಲ್ಲಿಂದು ಬೆಳಗ್ಗೆ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮಾವೋವಾದಿ ಸಂಘಟನೆಯ ಪ್ರಮುಖ ನಾಯಕ ಮದ್ವಿ ಹಿದ್ಮಾ (Madvi Hidma), ಆತನ ಪತ್ನಿ ಸೇರಿ 6 ಮಂದಿ ಹತ್ಯೆಗೀಡಾಗಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿಲ್ಲ. ಹತ್ಯೆಯಾದ ನಕ್ಸಲರ ಗುರುತು ಮತ್ತು ಗಾಯಗೊಂಡವರ ವಿವರಗಳನ್ನ ಕಲೆಹಾಕಲಾಗುತ್ತಿದೆ. ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ದಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಆತ್ಮಾಹುತಿ ಬಾಂಬ್ ದಾಳಿಯೆಂಬುದು ಹುತಾತ್ಮರ ಕಾರ್ಯಾಚರಣೆ – ಬಾಂಬರ್ ಉಮರ್

ಕಳೆದ ಆರು ತಿಂಗಳಲ್ಲಿ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ನಡೆದ 2ನೇ ಪ್ರಮುಖ ಎನ್‌ಕೌಂಟರ್ ಇದಾಗಿದೆ. ಇದೇ ವರ್ಷ ಮೇ 7ರಂದು ವೈ. ರಾಮಾವರಂ ಮಂಡಲ ಅರಣ್ಯ ಪ್ರದೇಶದಲ್ಲಿ (Forest Area) ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳು ಮೃತಪಟ್ಟಿದ್ದರು. ಇದನ್ನೂ ಓದಿ: ದೇಶದಲ್ಲಿ ʻವೈಟ್ ಕಾಲರ್ʼ ರಕ್ಕಸರು – ಹೇಗೆ ಹುಟ್ಟಿಕೊಳ್ತಾರೆ? ಭಾರತಕ್ಕೆ ಏಕೆ ಸವಾಲು?
ಮದ್ವಿ ಮೋಸ್ಟ್ ವಾಂಟೆಡ್ ನಕ್ಸಲ
ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲ (Naxal Leader) ಮದ್ವಿ ಹಿದ್ಮಾ ಭಾರತದ ಮೋಸ್ಟ್ ವಾಂಟೆಡ್ ನಕ್ಸಲರಲ್ಲಿ ಒಬ್ಬನಾಗಿದ್ದ. ಸಿಪಿಐ (ಮಾವೋವಾದಿ) ಸಂಘಟನೆಯ ಉನ್ನತ ಕಮಾಂಡರ್ ಆಗಿದ್ದ. ಈತನ ತಲೆಗೆ 25 ರಿಂದ 50 ಲಕ್ಷ ರೂ. ವರೆಗೆ ಬಹುಮಾನ ಘೋಷಿಸಲಾಗಿತ್ತು. ಕಳೆದ ಕೆಲ ವರ್ಷಗಳಲ್ಲಿ ಛತ್ತಿಸ್‌ಘಡದ ಬಸ್ತಾರ್, ಸುಕ್ಮಾ, ದಾಂತೇವಾಡ ಹಾಗೂ ಮಲ್ಕನ್‌ಗಿರಿ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಅರೆಸೇನಾಪಡೆಗಳ ಮೇಲೆ ನಡೆದ ಘೋರ ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ. 2010ರ ದಾಂತೇವಾಡದಲ್ಲಿ 76 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾಗಿದ್ದ ಮದ್ವಿ ಬಗ್ಗೆ ಮಾಹಿತಿ ನೀಡಿದವರಿಗೆ 1 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು ಎಂದು ಭದ್ರತಾಪಡೆಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದೆಹಲಿ ಬಾಂಬ್ ಸ್ಫೋಟ – ಅಲ್-ಫಲಾಹ್ ವಿವಿ ಸೇರಿದಂತೆ 25 ಕಡೆ ಇಡಿ ದಾಳಿ

ಮಾವೋವಾದಿಗಳ ಕಾರ್ಯಾಚರಣೆಗೆ ದೊಡ್ಡ ಹೊಡೆತ
ಉನ್ನತ ಕಮಾಂಡರ್ ಆಗಿದ್ದ ಹಿದ್ಮಾ ಛತ್ತಿಸ್‌ಗಢ, ಜಾರ್ಖಂಡ್, ಒಡಿಶಾ ಹಾಗೂ ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಮಾವೋವಾದಿ ಚಳವಳಿಗಳನ್ನ ಬಲವಾಗಿ ಸಂಘಟಿಸಿದ್ದ. ಜೊತೆಗೆ ಸಂಘಟನೆಗೆ ನೇಮಕಾತಿ ಈತನ ಮುಂದಾಳತ್ವದಲ್ಲೇ ನಡೆಯುತ್ತಿತ್ತು. ದರ್ಭಾ, ಸುಕ್ಮಾ, ಕೊಂಟೈಗಳಲ್ಲಿ ಈತ ನಕ್ಸಲ್ ಕಾರ್ಯಾಚರಣೆಗಳನ್ನ ನಡೆಸುತ್ತಿದ್ದ. ಸದ್ಯ ಈತನ ಎನ್‌ಕೌಂಟರ್ ಛತ್ತಿಸ್‌ಘಡ ವ್ಯಾಪ್ತಿಯ ನಕ್ಸಲ್ ಚಟುವಟಿಕೆಗಳಿಗೆ ಬಹುದೊಡ್ಡ ಹೊಡೆತ ನೀಡಿದಂತಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

