Sunday, 22nd July 2018

Recent News

ಭಾರೀ ಟ್ವಿಸ್ಟ್, ಮಧ್ಯೆ ಬ್ರೇಕಪ್ ಸುದ್ದಿ, ಕೊನೆಗೆ ಮದ್ವೆ – ಇಲ್ಲಿದೆ ವಿರುಷ್ಕಾ ಲವ್ ಸ್ಟೋರಿ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಧ್ಯೆ ಲವ್ ಇದ್ಯಾ? ಇಲ್ಲವೋ? ಇಬ್ಬರ ಮದುವೆ ಯಾವಾಗ ಈ ಸುದ್ದಿಗೆ ಈಗ ಪೂರ್ಣ ವಿರಾಮ ಬಿದ್ದಿದೆ. ಇಟಲಿಯಲ್ಲಿ ಇಬ್ಬರು ಮದುವೆಯಾಗುವ ಮೂಲಕ ಎಲ್ಲ ಅಂತೆ ಕಂತೆಗಳ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

ಈ ಇಬ್ಬರನ್ನು ಆರಂಭದಲ್ಲಿ ಸ್ನೇಹಿತರನ್ನಾಗಿ ಮಾಡಿದ್ದು ಒಂದು ಜಾಹೀರಾತು. ಈ ಜಾಹೀರಾತಿನಿಂದ ಒಂದಾದ ಜೋಡಿ ಕೊನೆಗೆ ಮದುವೆ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಈಗ ಶಾಶ್ವತವಾಗಿ ಒಂದಾಗಿದ್ದಾರೆ.

ಅದು 2013ರ ಸಮಯ, ಧೋನಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದರೆ, ಕೊಹ್ಲಿಗೆ ಉಪನಾಯಕನ ಪಟ್ಟ ಸಿಕ್ಕಿತ್ತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ 2010 ರಿಂದ 2013ರವರೆಗೆ ಭಾರತದ ಪರ ವರ್ಷವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎನ್ನುವ ಹೆಗ್ಗಳಿಗೆ ಕೊಹ್ಲಿ ಪಾತ್ರರಾಗಿದ್ದರು. 2008ರಲ್ಲೇ ‘ರಬ್ ನೆ ಬನಾದಿ ಜೋಡಿ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಅನುಷ್ಕಾ ಮೊದಲ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡರು. ಪಾತ್ರದಿಂದ ಪಾತ್ರಕ್ಕೆ ಉತ್ತಮ ನಿರ್ವಹಣೆ ತೋರಿದ ಪರಿಣಾಮ ಅನುಷ್ಕಾಗೂ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾದಂತೆ, ಇತ್ತ ಭರ್ಜರಿ ಆಟದಿಂದಾಗಿ ಕೊಹ್ಲಿಗೂ ಅಭಿಮಾನಿಗಳು ಹೆಚ್ಚಾದರು.

ಇಬ್ಬರಿಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಾದಂತೆ ಶಾಂಪೂ ಕಂಪೆನಿಯೊಂದರ ಜಾಹೀರಾತಿಗೆ ಇಬ್ಬರು ಸಹಿ ಹಾಕಿದರು. ಈ ಮೂಲಕ ಮೊದಲ ಬಾರಿಗೆ ಅನುಷ್ಕಾ, ಕೊಹ್ಲಿ ಮುಖಾಮುಖಿ ಭೇಟಿಯಾದರು. ವಿಡಿಯೋ ಜಾಹೀರಾತಿನಲ್ಲಿ ಇಬ್ಬರ ನಟನೆ ಸೂಪರ್ ಆಗಿತ್ತು. ಈ ಜಾಹೀರಾತಿನಲ್ಲಿ ಅಭಿನಯ ನೋಡಿದ ಬಳಿಕ ಸಿನಿಮಾದಲ್ಲಿ ಅವಕಾಶ ಕೊಟ್ಟರೂ ಕೊಹ್ಲಿ ಅಭಿನಯಿಸುವ ಸಾಮರ್ಥ್ಯ  ಹೊಂದಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ಈ ಸ್ಪೆಷಲ್ ರಿಂಗ್ ಗಾಗಿ 3 ತಿಂಗಳು ಅಲೆದಾಡಿದ್ರಂತೆ ಕೊಹ್ಲಿ! ಇದರ ಬೆಲೆ ಎಷ್ಟು ಗೊತ್ತಾ?

ಈ ಜಾಹೀರಾತಿನಲ್ಲಿ ಕಾಣುವುದಕ್ಕೂ ಮೊದಲು ಅನುಷ್ಕಾ ಶರ್ಮಾ ರಣ್‍ವೀರ್ ಸಿಂಗ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ, ವಿರಾಟ್ ತೆಲುಗು ನಟಿ ತಮನ್ನಾ ಜೊತೆ ಸ್ನೇಹ ಹೊಂದಿದ್ದಾರೆ ಎನ್ನುವ ಅಂತೆ ಕಂತೆ ಸುದ್ದಿ ಬಾಲಿವುಡ್, ಕ್ರಿಕೆಟ್ ಅಂಗಳದಿಂದ ಕೇಳಿ ಬಂದಿತ್ತು. ಈ ನಡುವೆ ಇಬ್ಬರು ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಜಾಹೀರಾತಿನಲ್ಲಿ ಅಭಿನಯಿಸಿದ ನಂತರ ಅನುಷ್ಕಾ, ವಿರಾಟ್ ಸ್ನೇಹಿತರಾಗಿದ್ದರೆ ವಿನಾಃ ಲವ್ವರ್ ಗಳಾಗಿರಲಿಲ್ಲ. ಹೀಗಾಗಿ ಲವ್ ವದಂತಿ ಯಾವುದೇ ಬಂದಿರಲಿಲ್ಲ. ಆದರೆ ಸಿನಿಮಾ ಸೆಟ್ ನಲ್ಲಿ ಕೊಹ್ಲಿ ಕಾಣಿಸಲು ಆರಂಭಿಸಿದ ಬಳಿಕ ಇಬ್ಬರ ನಡುವೆ ಏನೋ ಇದೆ ಎನ್ನುವ ಮಾತುಗಳು ಕೇಳಿ ಬರಲು ಆರಂಭಗೊಂಡಿತು. ಆದರೆ ಇವರಿಬ್ಬರು ಸಾರ್ವಜನಿಕವಾಗಿ ಎಲ್ಲೂ ಹೇಳಿಕೊಳ್ಳದ ಕಾರಣ ಇದು ವದಂತಿ ಎಂದೇ ಪರಿಗಣಿಸಲಾಗುತಿತ್ತು. ಆದರೆ 2014ರಲ್ಲಿ ಕೊಹ್ಲಿ ಉದಯ್‍ಪುರದಲ್ಲಿ ಅನುಷ್ಕಾ ಶರ್ಮಾ 26ನೇ ಹುಟ್ಟುಹಬ್ಬದ ವೇಳೆ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ಶುಭಾಶಯ ತಿಳಿಸಿದ್ದು ಅಚ್ಚರಿಗೆ ಕಾರಣವಾಗಿತ್ತು. ಕೊಹ್ಲಿ ಸಪ್ರೈಸ್ ಆಗಿ ಭೇಟಿ ಕೊಟ್ಟ ಬಳಿಕ ಇಬ್ಬರ ನಡುವೆ ಲವ್ ಇದೆ ಎನ್ನುವ ಮಾತುಗಳು ಕೇಳಿ ಬರಲು ಆರಂಭವಾಯಿತು.

ಈ ಮಧ್ಯೆ 2014ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿತ್ತು. ಈ ಪ್ರವಾಸದ ವೇಳೆ ಅನುಷ್ಕಾ ಶರ್ಮಾ ಆಸ್ಟ್ರೇಲಿಯಾಗೆ ತೆರಳಿದ್ದರು. ಇಬ್ಬರು ಜೊತೆಯಾಗಿ ಇರುವ ಫೋಟೋಗಳನ್ನು ನೋಡಿದಾಗ ಇಬ್ಬರ ನಡುವೆ ಪ್ರೀತಿ ಇದೆ ಎನ್ನುವುದಕ್ಕೆ ಪುಷ್ಠಿ ಸಿಕ್ಕಿತ್ತು. ಇದಾದ ಬಳಿಕ ಆ ವರ್ಷದ ನವೆಂಬರ್ ನಲ್ಲಿ ಶ್ರೀಲಂಕಾ ವಿರುದ್ಧ ರಾಂಚಿಯಲ್ಲಿ ನಡೆದ 5ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 6 ಸಾವಿರ ರನ್ ಪೂರ್ಣಗೊಳಿಸಿದರು. 50 ರನ್ ಗಳಿಸಿದ ಬಳಿಕ ಬ್ಯಾಟನ್ನು ಮೇಲಕ್ಕೆ ಎತ್ತಿ ಕೊಹ್ಲಿ ಸ್ಟೇಡಿಯಂನಲ್ಲಿ ಕುಳಿತಿದ್ದ ಅನುಷ್ಕಾ ಶರ್ಮಾ ನೋಡಿ ಫ್ಲೈಯಿಂಗ್ ಕಿಸ್ ನೀಡಿದರು. ಈ ದೃಶ್ಯವನ್ನು ನೋಡಿದ ಬಳಿಕ ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವುದು ಪಕ್ಕಾ ಆಯಿತು. ಇದನ್ನೂ ಓದಿ: ಜಗತ್ತಿನ ಈ ಸುಂದರ ತಾಣಕ್ಕೆ ಹನಿಮೂನ್ ಹೋಗಲಿದ್ದಾರೆ ವಿರುಷ್ಕಾ

ಎಲ್ಲ ಬೆಳವಣಿಗೆಯ ನಂತರ 2015ರಲ್ಲಿ ವಿರಾಟ್ ಫಾರ್ಮ್‍ನಲ್ಲಿ ಇದ್ದರೂ ಕೆಲವು ಪಂದ್ಯಗಳನ್ನು ಬೇಗನೇ ಔಟಾಗುತ್ತಿದ್ದರು. 2015 ವಿಶ್ವಕಪ್ 2016 ಟಿ 20 ವಿಶ್ವಕಪ್ ನಲ್ಲಿ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಕ್ಕೆ ಅನುಷ್ಕಾ ಶರ್ಮಾನೇ ಕಾರಣ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲು ಆರಂಭಿಸಿದರು. ಅಲ್ಲಿಯವರೆಗೆ ಮೌನವಾಗಿದ್ದ ಕೊಹ್ಲಿ 2016ರ ಮಾರ್ಚ್ ನಲ್ಲಿ ಇನ್ ಸ್ಟಾಗ್ರಾಮ್ ನಲ್ಲಿ ‘ಶೇಮ್’ ಎಂದು ದೊಡ್ಡದಾಗಿ ಎಂದು ಬರೆದು ಟೀಕಿಸಿದವರಿಗೆ ದೀರ್ಘ ಉತ್ತರ ನೀಡಿದರು.

ಅನುಷ್ಕಾ ಶರ್ಮಾ ಮತ್ತು ನಾನು ಇಬ್ಬರು ಉತ್ತಮ ಸ್ನೇಹಿತರು. ನನ್ನ ಆಟದಲ್ಲಿ ಆಕೆಯದ್ದು ಯಾವುದೇ ನಿಯಂತ್ರಣ ಇಲ್ಲ. ಈ ವಿಚಾರದಲ್ಲಿ ಆಕೆಯನ್ನು ಎಳೆದು ತಂದು ಟ್ರೋಲ್ ಮಾಡುವುದು ಸರಿಯಲ್ಲ. ನನಗೆ ನೀವು ಯಾವುದೇ ಗೌರವ ನೀಡುವ ಅಗತ್ಯ ಇಲ್ಲ. ಆದರೆ ಆಕೆಗೆ ಗೌರವ ನೀಡಿ. ನಿಮ್ಮ ವೈಫಲ್ಯಕ್ಕೆ ನಿಮ್ಮ ಸಹೋದರಿ, ಗೆಳತಿ ಅಥವಾ ಪತ್ನಿಯನ್ನು ನೀವು ಹೊಣೆಗರರನ್ನಾಗಿ ಮಾಡುತ್ತಿರಾ ಎಂದು ದೀರ್ಘವಾಗಿ ಬರೆದು ಅನುಷ್ಕಾ ಶರ್ಮಾ ಅವರನ್ನು ಬೆಂಬಲಿಸಿದ್ದರು.ಇದನ್ನೂ ಓದಿ:ದ್ರಾಕ್ಷಿ ತೋಟದ ರೆಸಾರ್ಟ್ ಗೆ ಒಂದು ದಿನಕ್ಕೆ ಇಷ್ಟು ವ್ಯಯಿಸಿದ್ರಂತೆ ವಿರುಷ್ಕಾ!

ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಅನ್ ಫಾಲೋ ಆಗಿದ್ದ ಕಾರಣ ಇಬ್ಬರ ನಡುವಿನ ಪ್ರೀತಿ ಬ್ರೇಕಪ್ ಆಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ನಾನು ಸಿನಿ ಕ್ಷೇತ್ರದಲ್ಲಿ ಮತ್ತಷ್ಟು ಮೇಲಕ್ಕೆ ಹೋಗಬೇಕು. ಹೀಗಾಗಿ ಮದುವೆಯಾಗುವುದಿಲ್ಲ ಎಂದು ಅನುಷ್ಕಾ ಹೇಳಿದ್ದಕ್ಕೆ ಇಬ್ಬರ ನಡುವಿನ ಲವ್ ಮುರಿದುಬಿದ್ದಿದೆ ಎನ್ನುವ ಗಾಸಿಪ್ ಸುದ್ದಿಗಳು ಕೇಳಿಬಂದಿತ್ತು.

ಈ ನಡುವೆ ಕೊಹ್ಲಿ ಇನ್ ಸ್ಟಾಗ್ರಾಮ್ ನಲ್ಲಿ ಹಾರ್ಟ್ ಬ್ರೋಕನ್ ಎಂದು ಬರೆದು ಪೋಸ್ಟ್ ಮಾಡಿದ್ದರು. ಇಷ್ಟೆಲ್ಲ ಆದ ಮೇಲೆ ಇವರಿಬ್ಬರು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿರುವುದನ್ನು ಅಭಿಮಾನಿಗಳು ಗಮನಿಸಿದರು. ಹೀಗಾಗಿ ಮತ್ತೆ ಇಬ್ಬರ ನಡುವೆ ಪ್ರೀತಿ ಅರಳಿದ್ಯಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಈ ಎಲ್ಲ ಪ್ರಹಸನಗಳು ಮುಗಿದ ಬಳಿಕ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. ದೊಡ್ಡ ದೊಡ್ಡ ಸಮಾರಂಭದಲ್ಲಿ ಇಬ್ಬರು ಒಟ್ಟಾಗಿ ಭಾಗವಹಿಸಿದರು. ಕಳೆದ ವರ್ಷದ ಯುವರಾಜ್ ಮತ್ತು ಹೇಜಲ್ ಕೀಚ್ ನಡುವಿನ ಮದುವೆ ಮತ್ತು ಈ ವರ್ಷ ಜಹೀರ್ ಖಾನ್ ಮತ್ತು ಸಾಗರಿಕಾ ಮದುವೆಯಲ್ಲಿ ಕಾಣಿಸಿದರು.

ಸಾರ್ವಜನಿಕವಾಗಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಫೋಟೋಗಳನ್ನು ಪ್ರಕಟಿಸುತ್ತಿದ್ದರು. ಫೋಟೋಗಳನ್ನು ನೋಡಿದ ನಂತ್ರ ಅಭಿಮಾನಿಗಳು ಮದುವೆ ಯಾವಾಗ ಎಂದು ಇಬ್ಬರಿಗೂ ಪ್ರಶ್ನೆ ಕೇಳುತ್ತಿದ್ದರು. ಈ ನಡುವೆ ಅಕ್ಟೋಬರ್ ನಲ್ಲಿ ಇಬ್ಬರು ವಿಡಿಯೋ ಜಾಹೀರಾತಿನಲ್ಲಿ ಕಾಣಿಸಿಕೊಂಡು ಎಲ್ಲರು ಹುಬ್ಬೇರುವಂತೆ ಮಾಡಿದ್ದರು. ಈ ಜಾಹೀರಾತಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸುವ ಈ ಜೋಡಿ ವಧು-ವರರು ಮಾತನಾಡಿಕೊಳ್ಳುತ್ತಿರುವ ಶೈಲಿಯನ್ನ ಕಾಮಿಕ್ ಆಗಿ ಪ್ರಸ್ತುತಪಡಿಸಿದ್ದರು. ತಿಂಗಳಲ್ಲಿ 15 ದಿನ ವಿರಾಟ್ ಅಡುಗೆ ಮಾಡೋದಾಗಿ ಒಪ್ಪಿಕೊಂಡರೆ ಯಾವುದೇ ಕಂಪ್ಲೇಂಟ್ ಇಲ್ಲದೆ ಅನುಷ್ಕಾ ಸೇವಿಸೋದಾಗಿ ಹೇಳಿದ್ದರು. ಇನ್ನು ವಿರಾಟ್ ಅನುಷ್ಕಾರನ್ನ ಯಾವಾಗಲೂ ಕೈಹಿಡಿದು ಕಾಪಾಡೋದಾಗಿ ಹೇಳಿರುವ ಮಾತು ಇವರಿಬ್ಬರ ಪ್ರೀತಿ ಪ್ರೇಮವನ್ನ ಸಾರಿ ಸಾರಿ ಹೇಳುತ್ತಿತ್ತು. ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಕೆಲವು ಸರಣಿಯಲ್ಲಿ ತಮಗೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಈ ಹಿಂದೆ ಬಿಸಿಸಿಐಗೆ ಕೊಹ್ಲಿ ಮನವಿಯಲ್ಲಿ ತಿಳಿಸಿದ್ದರು. ಜನವರಿಯಿಂದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಳ್ಳಲಿದ್ದು, ನಿರಂತರ ಕ್ರಿಕೆಟ್ ಆಡುತ್ತೀರೋ ಕೊಹ್ಲಿ ಅದಕ್ಕೂ ಮೊದಲು ಕೊಂಚ ವಿರಾಮ ಬಯಸಿದ್ದರು. ಹೀಗಾಗಿ ಡಿಸೆಂಬರ್ ನಲ್ಲಿ ಅನುಷ್ಕಾ ಜೊತೆ ಮದುವೆ ಮಾಡಲೆಂದೇ ರಜೆಗೆ ಮನವಿ ಮಾಡಿದ್ದರು ಎನ್ನುವ ಸುದ್ದಿ ಬಾಲಿವುಡ್, ಕ್ರಿಕೆಟ್ ವಲಯದಲ್ಲಿ ಹರಿದಾಡುತಿತ್ತು. ಈ ಸುದ್ದಿ ಹರಿದಾಡುತ್ತಿದ್ದರೂ ಕೊಹ್ಲಿ ಮತ್ತು ಅನುಷ್ಕಾ ಮದುವೆ ವಿಚಾರವನ್ನು ರಹಸ್ಯವಾಗಿಯೇ ಇಟ್ಟಿದ್ದರು.

ಇವರಿಬ್ಬರೂ ಎಷ್ಟೇ ರಹಸ್ಯವಾಗಿಟ್ಟರೂ ಡಿಸೆಂಬರ್ 6ರ ಸಂಜೆ ರಾಷ್ಟ್ರೀಯ ಮಾಧ್ಯಮಗಳಲ್ಲು ವಿರುಷ್ಕಾ ಜೋಡಿ ಇಟಲಿಯಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬ್ರೇಕ್ ಆಯ್ತು. ಈ ವಿಚಾರ ಬಹಿರಂಗಗೊಂಡ ನಂತರ ಅನುಷ್ಕಾ ವಕ್ತಾರರನ್ನು ಪ್ರಶ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಲ್ಲಿಗೆ ಇಟಲಿಯಲ್ಲಿ ಇಬ್ಬರು ರಹಸ್ಯವಾಗಿ ಮದುವೆಯಾಗಬೇಕೆಂದುಕೊಂಡಿದ್ದ ವಿಚಾರ ಸಾರ್ವಜನಿಕವಾಗಿ ಬಹಿರಂಗಗೊಂಡಿತು. ಅಂತಿಮವಾಗಿ ಡಿಸೆಂಬರ್ 11 ರಂದು ಹಿಂದೂ ಸಂಪ್ರದಾಯದಂತೆ ಕೊಹ್ಲಿ ಅನುಷ್ಕಾರನ್ನು ಸಂಗಾತಿಯನ್ನು ಸ್ವೀಕರಿಸುವ ಮೂಲಕ ಈ ಜೋಡಿ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.

 

Leave a Reply

Your email address will not be published. Required fields are marked *