Connect with us

Latest

ಕೆಲವು ಟ್ಯೂಬ್‍ಲೈಟ್‍ಗಳು ಹೀಗೆ ಇರುತ್ತವೆ: ಕೈ ಯುವ ನಾಯಕನಿಗೆ ಮೋದಿ ಟಾಂಗ್

Published

on

– ಜಮ್ಮು-ಕಾಶ್ಮೀರದ ಹೆಣ್ಣುಮಕ್ಕಳಿಗೆ ಏಕೆ ಅಧಿಕಾರ ನೀಡಲಿಲ್ಲ?
– ಕಾಶ್ಮೀರದ ಅಳಿಯ ಶಶಿ ತರೂರ್‍ಗೆ ಮೋದಿ ಪ್ರಶ್ನೆ
– ಭಾಷಣದ ಮಧ್ಯೆ ಅಧೀರ್ ರಂಜನ್ ಚೌಧರಿ ಕಾಲೆಳೆದ ಪ್ರಧಾನಿ

ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಕ್ರಿಯಿಸಿದರು. ಒಂದು ಗಂಟೆ 40 ನಿಮಿಷಗಳ ಭಾಷಣದಲ್ಲಿ ಮೋದಿ ವಿರೋಧ ಪಕ್ಷಗಳ ವಿರುದ್ಧ ತೀವ್ರ ಆಕ್ರಮಣಕಾರಿ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲದೆ ಟ್ಯೂಬ್‍ಲೈಟ್‍ಗಳು ಹೀಗೆ ಇರುತ್ತವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸಂಸದರ ವಿರುದ್ಧ ಹರಿಹಾಯ್ದರು. ಇದು ಕಲಾಪವನ್ನು ಕೆಲ ಹೊತ್ತು ಗದ್ದಲಕ್ಕೆ ಕಾರಣವಾಯಿತು.

70 ವರ್ಷಗಳಲ್ಲಿ ಕಾಂಗ್ರೆಸ್ ಎಂದಿಗೂ ತೃಪ್ತಿ ಹೊಂದಿಲ್ಲ ಎಂದು ನಾನು ಒಪ್ಪುತ್ತೇನೆ. ನಿನ್ನೆ ಕಾಂಗ್ರೆಸ್ಸಿನ ಯುವ ನಾಯಕರೊಬ್ಬರು ನನ್ನನ್ನು ಕೋಲಿನಿಂದ ಹೊಡೆಯುತ್ತೇವೆ ಎಂದು ದೆಹಲಿ ಚುನಾವಣಾ ಪ್ರಚಾರದ ವೇಳೆ ಹೇಳಿದ್ದಾರೆ. ಹೀಗಾಗಿ ಅದನ್ನು ಸಹಿಸಿಕೊಳ್ಳಲು, ಮುಂದಿನ ಆರು ತಿಂಗಳಲ್ಲಿ ಪ್ರತಿ ಪೆಟ್ಟುಗಳನ್ನು ಎದುರಿಸಲು ಇನ್ನುಮುಂದೆ ಹೆಚ್ಚು ಹೆಚ್ಚು ಸೂರ್ಯ ನಮಸ್ಕಾರ ಮಾಡುತ್ತೇನೆ. 30-40 ನಿಮಿಷಗಳ ಕಾಲ ನಾನು ಮಾತನಾಡಿದ ನಂತರವೂ ಕಾಂಗ್ರೆಸ್ ನಾಯಕರು ಇನ್ನೂ ಟ್ಯೂಬ್‍ಲೈಟ್‍ನಂತೆ ಕುಳಿತಿರುವುದು ಸಂತೋಷ ತಂದಿದೆ ಎಂದು ವ್ಯಂಗ್ಯವಾಡಿದರು.

ಈ ವೇಳೆ ಬಿಜೆಪಿ ಸಚಿವರು ಹಾಗೂ ಸಂಸದರು ನಗೆ ಬೀರಿದರು. ಇದರಿಂದ ಕೋಪಗೊಂಡ ಕಾಂಗ್ರೆಸ್ ನಾಯಕರು ಗರಂ ಆಗಿ ಕಲಾಪದಲ್ಲಿ ಗಲಾಟೆ ಆರಂಭಿಸಿದರು. ಹೀಗಾಗಿ ಸ್ವಲ್ಪ ಗದ್ದಲ ಉಂಟಾಯಿತು.

ಬಳಿಕ ಭಾಷಣ ಮುಂದುವರಿಸಿದ ಪ್ರಧಾನಿ ಮೋದಿ, ಅಧೀರ್ ರಂಜನ್ ಚೌಧರಿ ಜೀ ಪಶ್ಚಿಮ ಬಂಗಾಳದಲ್ಲಿ ಏನು ನಡೆಯುತ್ತಿದೆ ಎಂಬುದರ ಪತ್ರವನ್ನು ತೆರೆದರೆ, ನಿಮಗೆ ತುಂಬಾ ತೊಂದರೆಯಾಗುತ್ತದೆ. ಜನರನ್ನು ಅಲ್ಲಿ ಕೊಲ್ಲಲಾಗುತ್ತದೆ. ಕಾಂಗ್ರೆಸ್ ಅವಧಿಯಲ್ಲಿ ಸಂವಿಧಾನದ ಸ್ಥಿತಿ ಏನು? ನೀವು ನಮ್ಮಂತೆ ಯೋಚಿಸಿದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಸಂವಿಧಾನವನ್ನು ಜಾರಿಗೆ ತರುವುದನ್ನು ಏಕೆ ನಿಲ್ಲಿಸಿದ್ದೀರಿ? ಶಶಿ ತರೂರ್ ಜೀ, ನೀವು ಜಮ್ಮು ಮತ್ತು ಕಾಶ್ಮೀರದ ಅಳಿಯ. ಅಲ್ಲಿ ಹೆಣ್ಣುಮಕ್ಕಳಿಗೆ ಏಕೆ ಅಧಿಕಾರ ನೀಡಲಿಲ್ಲ? 1990ರ ಜನವರಿ 19ರಂದು ಕೆಲವರು ಕಾಶ್ಮೀರದ ಗುರುತನ್ನು ಸಮಾಧಿ ಮಾಡಿದರು. ಸೂಫಿ ಸಂಪ್ರದಾಯ ಮತ್ತು ಎಲ್ಲಾ ಸಂಪ್ರದಾಯಗಳನ್ನು ಗೌರವಿಸುವುದು ಕಾಶ್ಮೀರದ ಗುರುತು ಎಂದು ಹೇಳಿ ವಾಗ್ದಾಳಿ ನಡೆಸಿದರು.

ನೀವು ಸಂವಿಧಾನವನ್ನು ಉಳಿಸಿ ಎಂದು ದಿನಕ್ಕೆ 100 ಬಾರಿ ಹೇಳಬೇಕು. ತುರ್ತು ಸಂದರ್ಭದಲ್ಲಿ ನಿಮಗೆ ಸಂವಿಧಾನ ನೆನಪಿಗೆ ಬರಲಿಲ್ಲ. ಆದರೆ ಈಗ ಸಂವಿಧಾನದ ಬಗ್ಗೆ ಕಾಳಜಿ ತೋರುತ್ತಿರುವಿರಿ ಎಂದು ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದರು.

ಯಾರಾದರೂ ಪ್ರಧಾನಿಯಾಗಬೇಕೆಂಬ ಆಕಾಂಕ್ಷೆ ಹೊಂದಬಹುದು. ಅದರಲ್ಲಿ ಯಾವುದೇ ತಪ್ಪಿಲ್ಲ. ಭಾರತವನ್ನು ಇಬ್ಭಾಗ ಮಾಡಿ ನಕ್ಷೆಯಲ್ಲಿ ಒಂದು ಗೆರೆ ಎಳೆಯಲಾಯಿತು. ಆಗ ಲಕ್ಷಾಂತರ ಹಿಂದೂಗಳು ಮತ್ತು ಸಿಖ್ಖರನ್ನು ಹಿಂಸಿಸಲಾಯಿತು. ಭೂಪೇಂದ್ರ ಕುಮಾರ್ ದತ್ ಒಂದು ಕಾಲದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಅವರು ಜೈಲಿನಲ್ಲಿ 78 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅವರನ್ನು ಪಾಕಿಸ್ತಾನದಲ್ಲಿ ಬಿಡಲಾಗಿತ್ತು. ವಿಭಜನೆಯ ನಂತರ ಸಂವಿಧಾನ ಸಭೆಯಲ್ಲಿ ಅವರು ಅಲ್ಪಸಂಖ್ಯಾತರ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದರ ನಂತರ ವಿಷಯಗಳು ಇನ್ನಷ್ಟು ಹದಗೆಟ್ಟವು ಮತ್ತು ಭೂಪೇಂದ್ರ ದತ್ ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ಇದು ನಿಮ್ಮ ಆಲೋಚನೆ ಎಂದು ಕಾಂಗ್ರೆಸ್ ವಿರುದ್ಧ ದೂರಿದರು.

ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ಜೋಗಿರಾಜ್ ಮಂಡಲ್ ಕೂಡ ಪಾಕಿಸ್ತಾನದಲ್ಲಿಯೇ ಇದ್ದರು. ಅವರನ್ನು ಕಾನೂನು ಮಂತ್ರಿಯನ್ನಾಗಿ ಮಾಡಲಾಯಿತು. ಅವರು ಆಗಸ್ಟ್ 9, 1950ರಂದು ರಾಜೀನಾಮೆ ನೀಡಿದ್ದರು. ಮುಸ್ಲಿಂ ಲೀಗ್‍ನ ಎಲ್ಲ ಅಭಿಪ್ರಾಯಗಳನ್ನು ಪಾಕಿಸ್ತಾನ ಒಪ್ಪಿಕೊಂಡಿಲ್ಲ ಎಂದು ಅದು ಬರೆದಿದೆ. ಅವರೂ ಭಾರತಕ್ಕೆ ಬರಬೇಕಿತ್ತು. ಇಷ್ಟು ದಶಕಗಳ ನಂತರವೂ ಪಾಕಿಸ್ತಾನದ ಚಿಂತನೆ ಬದಲಾಗಲಿಲ್ಲ ಎಂದು ಹೇಳಿ ಸಿಎಎ ಜಾರಿಗೆ ತಂದ ನಿರ್ಧಾರವನ್ನು ಸಮರ್ಥಿಸಿಕೊಂಡರು.

Click to comment

Leave a Reply

Your email address will not be published. Required fields are marked *