-ಯೋಧನ ಗೋಳು ಕೇಳೋರು ಯಾರೂ ಇಲ್ಲ
ಹಾವೇರಿ: ಕಾರ್ಗಿಲ್ ಯುದ್ಧದಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ಹೋರಾಟ ಮಾಡಿದ್ದರೂ ಜಮೀನು, ಸ್ವಂತ ಸೂರು ಮತ್ತು ಉದ್ಯೋಗಕ್ಕಾಗಿ ಮಾಜಿ ಯೋಧರೊಬ್ಬರು ಇಂದಿಗೂ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾವೇರಿ ನಗರದ ಹುಮನಾಬಾದ್ ಓಣಿಯ ನಿವಾಸಿ ಮಹಮ್ಮದ್ ಜಹಾಂಗೀರ ಖವಾಸ್, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಮಾಜಿ ಯೋಧ. ಇಪ್ಪತ್ತು ವರ್ಷಗಳ ಕಾಲ ಇವರು ಭಾರತೀಯ ಸೇನೆಯಲ್ಲಿ ದೇಶ ಕಾಯೋ ಕೆಲಸ ಮಾಡಿದ್ದಾರೆ. ಅದರಲ್ಲೂ 1999, ಜುಲೈ 26ರಂದು ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದರು. ಕಾರ್ಗಿಲ್ ಯುದ್ಧದಲ್ಲಿ ಕಾರ್ಗಿಲ್ ಗನ್ನರ್ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು ಹೈದರಾಬಾದ್, ಡೆಹರಾಡೂನ್, ಸಿಕ್ಕಿಂನಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಾರ್ಗಿಲ್ ಯುದ್ಧದ ನಂತರ 2000ರಂದು ಇವರು ನಿವೃತ್ತರಾಗಿದ್ದಾರೆ. ನಿವೃತ್ತಿ ನಂತರ ಸರ್ಕಾರದ 5 ಎಕರೆ ಜಮೀನು, ಉದ್ಯೋಗ ಮತ್ತು ಸ್ವಂತ ಸೂರಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈವರೆಗೂ ಅರ್ಜಿಗಳ ಮೇಲೆ ಅರ್ಜಿಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಇದೂವರೆಗೂ ಸ್ವಂತ ಸೂರು, ಉದ್ಯೋಗ ಮತ್ತು ಸರಕಾರದ ಜಮೀನು ಮಾತ್ರ ಸಿಕ್ಕಿಲ್ಲ.
ಶಾಸಕರು, ಸಂಸದರು, ಸಚಿವರು ಮತ್ತು ಅಧಿಕಾರಿಗಳಿಗೂ ಈ ಮಾಜಿ ಯೋಧ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದಾರೆ. ಆದರೆ ಎಲ್ಲರಿಂದಲೂ ಭರವಸೆ ಬಿಟ್ಟರೆ ಇವರಿಗೆ ಉದ್ಯೋಗ, ಸ್ವಂತ ಸೂರು ಮತ್ತು ಸರಕಾರದ ಜಮೀನು ಕೊಡಿಸುವ ಕೆಲಸವಾಗಿಲ್ಲ. ಕಾರ್ಗಿಲ್ ಯುದ್ಧದ ವೇಳೆ ವೈರಿಗಳ ವಿರುದ್ಧ ಹೋರಾಟ ಮಾಡುವಾಗಲೂ ಮಹಮ್ಮದ್ ಖವಾಸ್ ಇಷ್ಟೊಂದು ತೊಂದರೆ ಅನುಭವಿಸಿಲ್ಲ. ಈಗ ಸೂರು, ಉದ್ಯೋಗ ಮತ್ತು ಜಮೀನಿಗಾಗಿ ಅಲೆದಾಡಿ ಸಾಕಷ್ಟು ಸುಸ್ತಾಗಿದ್ದಾರೆ.
2000ರಲ್ಲಿ ಖವಾಸ್ ವೃತ್ತಿಯಿಂದ ನಿವೃತ್ತರಾದ ಮೇಲೆ ಉದ್ಯೋಗ, ಸೂರು ಮತ್ತು ಜಮೀನಿಗಾಗಿ ಅರ್ಜಿಗಳ ಮೇಲೆ ಅರ್ಜಿ ಸಲ್ಲಿಸಿದ್ದರು. ಕಾರ್ಗಿಲ್ ಯುದ್ಧ ಇಡೀ ದೇಶದ ಚರಿತ್ರೆಯಲ್ಲೇ ದಾಖಲಾಗಿದ್ದರಿಂದ ಸರ್ಕಾರದ ಸೌಲಭ್ಯಗಳು ಸಿಗೋದು ಅಷ್ಟೊಂದು ಕಷ್ಟವಾಗೋದಿಲ್ಲ ಅಂತಾ ಭಾವಿಸಿದ್ದರು. ಆದರೆ ಯುದ್ಧದಲ್ಲಿ ಹೋರಾಟ ಮಾಡಿದ್ದಕ್ಕಿಂತಲೂ ಸೌಲಭ್ಯ ಪಡೆಯಲು ಮಹಮ್ಮದ್ ಖವಾಸ್ ಹೆಚ್ಚಿನ ಹೋರಾಟ ಮಾಡುತ್ತಿದ್ದಾರೆ. ನಿವೃತ್ತಿ ನಂತರ ಸರ್ಕಾರದಿಂದ ಯಾವುದೇ ಉದ್ಯೋಗ ಸಿಗದೆ ಕುಟುಂಬ ನಿರ್ವಹಣೆಗೆ ಕೆಲವು ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ರು.
ಇದೀಗ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನೂ ಬಿಟ್ಟು ಮನೆಯಲ್ಲಿದ್ದಾರೆ. ಪತ್ನಿ, ನಾಲ್ವರು ಮಕ್ಕಳ ತುಂಬು ಸಂಸಾರ ಇವರದ್ದು, ವಾಸಿಸಲು ಸ್ವಂತ ಮನೆಯಿಲ್ಲ. ಬೇರೊಬ್ಬರ ಮೆನಯನ್ನು ಲೀಸ್ ಗೆ ಪಡೆದು ಆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಕಾರ್ಗಿಲ್ ದಿವಸ್ ಬಂದಾಗೊಮ್ಮೆ ಮಾಜಿ ಯೋಧ ಮಹಮ್ಮದ್ ಖವಾಸ್ ರಿಗೆ ಸನ್ಮಾನ, ಹೊಗಳಿಕೆಗಳು ಬರುತ್ತಿವೆ. ಕಾರ್ಗಿಲ್ ದಿವಸ್ ಕಾರ್ಯಕ್ರಮ ಮುಗೀತು ಅಂದರೆ ನಂತರ ಯಾರೂ ಕ್ಯಾರೇ ಅಂತಿಲ್ಲ. ಸೂರು, ಉದ್ಯೋಗ ಮತ್ತು ಸರಕಾರದ ಭೂಮಿಗಾಗಿ ಅಲೆದಾಡುತ್ತಿರೋದನ್ನ ನೋಡಿ ಮಹಮ್ಮದ್ ಖವಾಸ್ ಅವರ ಕುಟುಂಬಕ್ಕೂ ಸಾಕಾಗಿ ಹೋಗಿದೆ ಎಂದು ಸ್ಥಳೀಯ ಮಲ್ಲಿಕಾರ್ಜನ್ ತಿಳಿಸಿದ್ದಾರೆ.