ತಿರುನಂತರಪುರಂ: ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ (SC-ST (POA) Act) ಅಡಿಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ ಎಚ್ಚರಿಕೆಯಿಂದ ವಿಶ್ಲೇಷಣೆ ಮಾಡಬೇಕು ಎಂದು ಕೇರಳ ಹೈಕೋರ್ಟ್ (Kerala High Court) ಸೂಚಿಸಿದೆ.
ಅನೇಕ ಅಮಾಯಕರು ಸುಳ್ಳು ಪ್ರಕರಣಗಳಿಗೆ ಬಲಿಯಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಆದ್ದರಿಂದ ಎಸ್ಸಿ-ಎಸ್ಟಿ ಕಾಯ್ದೆ ಅಡಿಯ ಪ್ರಕರಣಗಳು ಬಂದಾಗ ನ್ಯಾಯಾಲಯಗಳು (Court) ಹೆಚ್ಚಿನ ವಿವರಗಳಿಗೆ ಗಮನ ಕೊಡಬೇಕು ಎಂದು ನ್ಯಾಯಮೂರ್ತಿ ಎ. ಬದ್ರುದ್ದೀನ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ. ಇದನ್ನೂ ಓದಿ: ಝಿಕಾ ಆತಂಕ – ಕಾಂಡೋಮ್ ಜಾಗೃತಿ ಬಳಿಕ ಗರ್ಭಿಣಿಯರ ಮೇಲೆ ತೀವ್ರ ನಿಗಾ
ಎಸ್ಸಿ-ಎಸ್ಟಿ ಕಾಯ್ದೆ (ದೌರ್ಜನ್ಯ ತಡೆ) ಅಡಿಯಲ್ಲಿ ಅನೇಕ ಮುಗ್ಧರು ಸುಳ್ಳು ಪ್ರಕರಣಗಳಿಗೆ ಬಲಿಯಾಗುತ್ತಿರುವುದು ಆಘಾತಕಾರಿ ಘಟನೆ. ಆದ್ದರಿಂದ ನ್ಯಾಯಾಲಯಗಳು ಪ್ರಕರಣಗಳನ್ನು ಮೂಲದಿಂದ ವಿಶ್ಲೇಷಣೆ ಮಾಡುವ ಅಗತ್ಯವಿದೆ. ಪ್ರಕರಣದ ಹುಟ್ಟು, ಅಪರಾಧದ ನೋಂದಣಿಯಾಗುವುದಕ್ಕೂ ಮುಂಚಿನ ಪೂರ್ವಕಥೆಗಳು, ದೂರುದಾರ ಮತ್ತು ಆರೋಪಿ (Accused) ನಡುವಿನ ದ್ವೇಷದ ಅಸ್ತಿತ್ವ ಈ ಎಲ್ಲ ಅಂಶಗಳನ್ನು ಉಲ್ಲೇಖಿಸಬೇಕು. ಜೊತೆಗೆ ಜಾಮೀನು ಅರ್ಜಿ ಪರಿಗಣಿಸುವಾಗ ಹಿಂದಿನ ವಿವಾದಗಳು, ಪ್ರಕರಣಗಳು ಹಾಗೂ ದೂರುಗಳನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಶೇಷ ನ್ಯಾಯಾಲಯ ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ಸಮಯದಲ್ಲಿ ಕೋರ್ಟ್ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ತನ್ನ ಚುನಾವಣೆಯ ಗೆಲುವಿನ ರಹಸ್ಯ ರಿವೀಲ್ ಮಾಡಿದ ಮೋದಿ
ಏನಿದು ಪ್ರಕರಣ?
ಬ್ಯಾಂಕ್‌ಗೆ ಹೋದಾಗ ಅಲ್ಲಿದ್ದ ಮಹಿಳಾ ಉದ್ಯೋಗಿ ತನ್ನನ್ನು ಜಾತಿ ಹೆಸರಿನಿಂದ ನಿಂದಿಸಿದ್ದಾಳೆ ಎಂದು ಆರೋಪಿಸಿ ಎಸ್ಸಿ-ಎಸ್ಟಿ ಕಾಯ್ದೆ (ದೌರ್ಜನ್ಯ ತಡೆ) ಅಡಿ ಕೇಸ್ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದರು. ಆದರೆ ದೂರುದಾರ ವ್ಯಕ್ತಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿರಲಿಲ್ಲ. ಮಹಿಳೆಯೊಂದಿಗೆ ಕೆಲಸ ಮಾಡುತ್ತಿದ್ದವರಲ್ಲಿ ಒಬ್ಬರಾಗಿದ್ದರು. ಪದೇ-ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದರಿಂದ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದರು. ಈ ಲೈಂಗಿಕ ಕಿರುಕುಳದ ದೂರನ್ನು ಹಿಂತೆಗೆದುಕೊಳ್ಳುವಂತೆ ಬೆದರಿಸಲು ಮಾಡಿದ ಪ್ರಯತ್ನಗಳಲ್ಲಿ ಇದೂ ಒಂದಾಗಿದೆ ಎಂದು ಮಹಿಳಾ ಪರ ವಕೀಲರು ವಾದಿಸಿದ್ದರು.