ಬೆಂಗಳೂರು: ಮಂತ್ರಿ ಸರ್ವೇ ವಿಚಾರ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಹತ್ತಾರು ವರ್ಷಗಳಿಂದ ನೂರಾರು ಮಂದಿ ವಾಸವಿರುವ ಜಾಗ ಬಿಬಿಎಂಪಿಗೆ ಸೇರಿದ್ದು ಎಂದು ಸರ್ವೇ ಹೇಳುತ್ತಿದೆ. ಇದು ಮಂತ್ರಿ ನಿವಾಸಿಗಳ ನಿದ್ದೆ ಕೆಡಿಸಿದೆ.
ಸದ್ಯ ಜಕರಾಯನಕೆರೆಯ ಹನುಮಂತಪುರ ಸರ್ವೆ ನಂಬರ್ 56ರ ಸರ್ವೆ ಮುಗಿದಿದೆ. ಇದರಲ್ಲಿ ಒತ್ತುವರಿಯಾಗಿರುವುದು ಕಂಡು ಬಂದಿದ್ದು, ಪಾಲಿಕೆ ಜಾಗವನ್ನು ಮಂತ್ರಿ ಗ್ರೀನ್ಸ್ ಒತ್ತುವರಿ ಮಾಡಿದೆ ಎಂದು ಖುದ್ದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವರದಿ ಪ್ರಕಾರ ಜಕ್ಕಸಂದ್ರ ಗ್ರಾಮದಲ್ಲಿ 3 ಎಕರೆ 31 ಗುಂಟೆ ಜಾಗದಲ್ಲಿ ಮಂತ್ರಿ ಗ್ರೀನ್ ಟವರ್ ಎದ್ದಿದೆ. ಬಿಬಿಎಂಪಿ ಹಾಗೂ ಸರ್ವೇ ಅಧಿಕಾರಿಗಳು ಫೆ.28 ರಂದು ಸರ್ವೇ ನಡೆಸಿ ಒತ್ತುವರಿಯಾಗಿರುವುದು ಪಕ್ಕಾ ಎಂದು ವರದಿ ಸಿದ್ಧಪಡಿಸಿದ್ದಾರೆ.
Advertisement
Advertisement
ಸದ್ಯ ಬಿಬಿಎಂಪಿ ಗ್ರೌಂಡ್ ಲೆವಲ್‍ನಲ್ಲಿ ಮಾರ್ಕಿಂಗ್ ಮಾತ್ರ ಮಾಡಿದೆ. ಪ್ರಾದೇಶಿಕ ಸಕ್ಷಮ ಪ್ರಾಧಿಕಾರ ಆದೇಶದ ಮೇರೆಗೆ ಈ ಸರ್ವೇ ನಡೆದಿದೆ. ಈ ವೇಳೆ ಮಂತ್ರಿ ಗ್ರೀನ್ಸ್ ನ ಹಳೆಯ ಒಂದು ಬ್ಲಾಕ್ ಹಾಗೂ ಹೊಸದಾಗಿ ನಿರ್ಮಾಣವಾಗುತ್ತಿರುವ ಎರಡು ಬ್ಲಾಕ್ ಒತ್ತುವರಿ ಜಾಗದಲ್ಲಿರುವುದು ಕಂಡು ಬಂದಿದೆ. ಒತ್ತುವರಿಯಾದ ಜಾಗದಲ್ಲಿರುವ ಒಂದು ಬ್ಲಾಕ್ ನಲ್ಲಿ 215 ಫ್ಲ್ಯಾಟ್ ಗಳಲ್ಲಿ ಜನರು ವಾಸ್ತವ್ಯ ಹೂಡಿದ್ದಾರೆ.
Advertisement
ಈ ಜಾಗವನ್ನು ಸದ್ಯ ಮಾರ್ಕಿಂಗ್ ಸಹ ಮಾಡಲಾಗಿದೆ. ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ವರದಿ ನೀಡಿದ ಬಳಿಕ ವಿಶೇಷ ಆಯುಕ್ತರು ಬಿಬಿಎಂಪಿ ಕಮೀಷನರ್‍ಗೆ ವರದಿ ಸಲ್ಲಿಕೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಿರುವ ಭಾಗದಲ್ಲಿಯೇ ಮಂತ್ರಿ ಗ್ರೀನ್ಸ್ ಇದೆ ಎಂಬುದನ್ನು ಇದೀಗ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಕೋರ್ಟಿಗೆ ಕೇವಿಯಟ್ ಸಹ ಹಾಕಲಾಗಿದೆ. ಹೀಗಾಗಿ ಬಿಬಿಎಂಪಿ ತೆರವಿಗೆ ನಿಂತರೆ ಮಂತ್ರಿ ಗ್ರೂಪ್ ಮುಂದೆ ಏನ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.