– ನಾವು ಕನ್ನಡ ಮಾತನಾಡುತ್ತೇವೆ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ
– ಆಂಧ್ರ ಸಿಎಂ ಕ್ರಮ ವಿರೋಧಿಸಿ ಟಿಡಿಪಿಯಿಂದ ಹೋರಾಟ
ರಾಯಚೂರು: ಆಂಧ್ರಪ್ರದೇಶದ ಮಂತ್ರಾಲಯ ಸೇರಿದಂತೆ ಕರ್ನೂಲ್ ಲೋಕಸಭಾ ಕ್ಷೇತ್ರವನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ತೆಲುಗುದೇಶಂ ಪಕ್ಷ ಹೊಸ ಹೋರಾಟವನ್ನು ಶುರು ಮಾಡಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನರೆಡ್ಡಿ ನೂತನ ಮೂರು ರಾಜಧಾನಿಗಳನ್ನು ಘೋಷಿಸಿದ್ದರಿಂದ ಜನ ಆಕ್ರೋಶಗೊಂಡಿದ್ದಾರೆ. ನಮಗೆ ಆಂಧ್ರಪ್ರದೇಶದ ಸಹವಾಸವೇ ಬೇಡ ನಮ್ಮನ್ನು ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಸೇರಿ ಬೆಂಗಳೂರೇ ನಮಗೆ ರಾಜಧಾನಿಯಾಗಿರಲಿ ಎಂದು ಟಿಡಿಪಿ ಪಕ್ಷದ(ತೆಲುಗುದೇಶಂ) ಮಂತ್ರಾಲಯ ಉಸ್ತುವಾರಿ ಪಿ. ತಿಕ್ಕಾರೆಡ್ಡಿ ಹೇಳಿದ್ದಾರೆ. ಸಿಎಂ ಕ್ರಮ ಖಂಡಿಸಿ ಆಂಧ್ರದ ಮಂತ್ರಾಲಯ, ಕೌತಾಳಂನಲ್ಲಿ ಪ್ರತಿಭಟನೆ ಮಾಡಿದ್ದಾರೆ.
Advertisement
Advertisement
ಆಡಳಿತಾತ್ಮಕ ರಾಜಧಾನಿಯಾಗಿ ವಿಶಾಖಪಟಣಂ, ಹೈಕೋರ್ಟ್ ಗಾಗಿ ಕರ್ನೂಲ್, ಭೂಮಿ ಕಳೆದುಕೊಂಡ ರೈತರಿಗಾಗಿ ಅಮರಾವತಿಯನ್ನು ರಾಜಧಾನಿಗಳಾಗಿ ಸಿಎಂ ನಿರ್ಧರಿಸಿದ್ದಾರೆ. ಕರ್ನೂಲ್ ನಲ್ಲಿ ಹೈಕೋರ್ಟ್ ಮಾಡಿದರೆ ನಮಗೇನು ಪ್ರಯೋಜನವಿಲ್ಲ. ವಿಶಾಖಪಟ್ಟಣಂಗೆ ಹೋಗಿ ಬರಲು ಎರಡು ದಿನ ಬೇಕು, ಅಷ್ಟು ದೂರದ ರಾಜಧಾನಿ ನಮಗೆ ಬೇಡ. ಒಮ್ಮೊಮ್ಮೆ ಒಂದೊಂದು ರಾಜಧಾನಿಯನ್ನು ಬದಲಿಸುತ್ತಾ ಹೋದರೆ ನಾವು ನೆಮ್ಮದಿಯಿಂದ ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
1956ರವರೆಗೆ ನಾವು ಬಳ್ಳಾರಿ ಜಿಲ್ಲೆಗೆ ಒಳಪಟ್ಟಿದ್ದೆವು. ನಾವೆಲ್ಲಾ ಕನ್ನಡ ಭಾಷೆಯನ್ನೇ ಮಾತನಾಡುತ್ತೇವೆ. ಬಳ್ಳಾರಿಯಲ್ಲಿ ಹೊಸಪೇಟೆ ತುಂಗಭದ್ರಾ ಡ್ಯಾಂ ಇದೆ. ನಮಗೆ ಕೃಷಿಗೆ ಅನುಕೂಲವಾಗುತ್ತದೆ. ನೀರು, ಮಕ್ಕಳಿಗೆ ಓದು ಎಲ್ಲಾ ಸಿಗುತ್ತದೆ. ನೀವು ಎಷ್ಟು ರಾಜಧಾನಿಗಳನ್ನಾದರೂ ಮಾಡಿಕೊಳ್ಳಿ. ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಟಿಡಿಪಿ ಮುಖಂಡ ತಿಕ್ಕಾರೆಡ್ಡಿ ಹೇಳಿದ್ದಾರೆ.
ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠಕ್ಕೆ ಕರ್ನಾಟಕದ ಭಕ್ತರೇ ಹೆಚ್ಚಾಗಿ ಇರುವುದರಿಂದ ಹಾಗೂ ಮಂತ್ರಾಲಯದಲ್ಲಿ ಕನ್ನಡ ಭಾಷಿಕರು ಅಧಿಕ ಪ್ರಮಾಣದಲ್ಲಿ ಇರುವುದರಿಂದ ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಲು ಕೂಡ ಒತ್ತಾಯಗಳು ಕೇಳಿ ಬಂದಿವೆ. ರಾಯಚೂರಿನಿಂದ ಮಂತ್ರಾಲಯ ಕೇವಲ 45 ಕಿ.ಮೀ ದೂರದಲ್ಲಿರುವುದರಿಂದ ರಾಯಚೂರು ಜಿಲ್ಲೆಗೆ ಸೇರಿಸಬೇಕು ಎಂದು ಕೂಗು ಕೇಳಿ ಬರುತ್ತಿದೆ.