ರಾಯಚೂರು: ಶಿವಮೊಗ್ಗ, ಬೀದರ್ನಲ್ಲಿ ಸಿಇಟಿ ಪರೀಕ್ಷೆ (CET Exam) ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಅಕ್ಷರಶಃ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿ ಮಠದ (Guru Raghavendra Swamy Mutt) ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ (Subudhendra Theertha Swami) ಹೇಳಿದರು.
ಮಂತ್ರಾಲಯದಲ್ಲಿ ಮಾತನಾಡಿದ ಅವರು, ಅವರವರ ಧರ್ಮವನ್ನು ಆಚರಿಸಲು ಸಂವಿಧಾನದಲ್ಲಿ ಅವಕಾಶ ಹಾಗೂ ಅಧಿಕಾರವಿದೆ. ಸಂವಿಧಾನದ ಬಗ್ಗೆ ಒಂದೆಡೆ ಮಾತನಾಡುವುದು, ಇನ್ನೊಂದೆಡೆ ಸ್ವಾತಂತ್ರ್ಯವನ್ನು ಹರಣ ಮಾಡುವಂತಹ ದ್ವಂದ್ವ ನಿಲುವು ಅತ್ಯಂತ ಖಂಡನೀಯ. ಕೇವಲ ವಿಪ್ರ ಸಮಾಜ ಮಾತ್ರವಲ್ಲ, ಯಾವುದೇ ಸಮುದಾಯದ ವಿಚಾರ ಬಂದಾಗ ಈ ರೀತಿಯಾದ ಧರ್ಮ-ವಿರೋಧಿ ಚಟುವಟಿಕೆಗಳು ಅತ್ಯಂತ ಅಸಹ್ಯ, ಹೇಯವಾಗಿರುವಂತವು. ನಾವೆಲ್ಲರೂ ಒಕ್ಕೊರಲಿನಿಂದ ವಿರೋಧಿಸುತ್ತೇವೆ ಹಾಗೂ ಖಂಡಿಸುತ್ತೇವೆ. ಇದರ ವಿರುದ್ಧ ಪ್ರತಿಭಟಿಸುತ್ತೇವೆ ಎಂದರು.ಇದನ್ನೂ ಓದಿ: ಧಾರವಾಡದಲ್ಲಿಯೂ ಜನಿವಾರ ಜಟಾಪಟಿ – ಹುರಕಡ್ಲಿ ಕಾಲೇಜಿನಲ್ಲಿ ಜನಿವಾರ ಕತ್ತರಿಸಿ ಸಿಇಟಿ ಬರೆಸಿದ ಸಿಬ್ಬಂದಿ
ಈ ರೀತಿ ಪುನರಾವರ್ತನೆಯಾಗದಂತೆ ಸರ್ಕಾರ ಎಚ್ಚರ ವಹಿಸಬೇಕು. ವಿದ್ಯಾರ್ಥಿಯ ಭವಿಷ್ಯ ಹಾಳಾಗಿದೆ, ಧರ್ಮಕ್ಕೆ ಚ್ಯುತಿ ಬಂದಿದೆ. ಎಲ್ಲಿಯೋ ಯಾರೋ ಶಾಸಕರು, ಮಂತ್ರಿಗಳು ತಪ್ಪಾಯಿತು ಎಂದು ಕೇಳುವುದು, ಸರಿಪಡಿಸುತ್ತೇವೆ ಎನ್ನುವುದು. ಕೇವಲ ಕಣ್ಣೀರು ಒರೆಸುವ ಮಾತು. ಹೀಗೆ ಮುಂದುವರೆದರೆ ಜಾತ್ಯತೀತವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸರ್ವಧರ್ಮಗಳ ಶಾಂತಿ ಹೂದೋಟವಾದ ಕರ್ನಾಟಕ ರಾಜ್ಯದಲ್ಲಿ ಧರ್ಮವಿರೋಧಿ ನೀತಿ ನಡೆಯುತ್ತಿದೆ ಎಂದರೆ ಇನ್ನೂ ಎಲ್ಲಿ ಮೊರೆ ಹೋಗಬೇಕು ಎಂದು ಪ್ರಶ್ನಿಸಿದರು.
ಬೇರೆ ಯಾವ ಸಮುದಾಯಕ್ಕೆ ಇಲ್ಲದಿರುವುದು ವಿಪ್ರ ಸಮುದಾಯಕ್ಕೆ ಮಾತ್ರ ಯಾಕೆ? ಇದನ್ನ ತೀವ್ರವಾಗಿ ಖಂಡಿಸುತ್ತೇವೆ, ಅನ್ಯಾಯ ಸರಿಪಡಿಸಬೇಕು. ಮುಂದೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.ಇದನ್ನೂ ಓದಿ: PUBLiC TV Impact | ಜನಿವಾರ ಹಾಕಿದ್ದಕ್ಕೆ ಸಿಇಟಿಗೆ ನೋ ಎಂಟ್ರಿ – ಫ್ರೀ ಎಂಜಿನಿಯರಿಂಗ್ ಸೀಟ್ ಆಫರ್ ಕೊಟ್ಟ ಈಶ್ವರ್ ಖಂಡ್ರೆ