ಕುಂಭಮೇಳದಲ್ಲಿ ಭಕ್ತರು ತಾಳ್ಮೆ, ಜಾಗೃತಿ ವಹಿಸಬೇಕು.. ಮೃತರಿಗೆ ಸದ್ಗತಿಯಾಗಲಿ: ಮಂತ್ರಾಲಯ ಶ್ರೀ ಸಂತಾಪ

Public TV
1 Min Read
kumbh mela stampede

– ಕುಂಭಮೇಳ ಧಾರ್ಮಿಕ ಶ್ರದ್ಧೆಯ ವಿಚಾರ.. ರಾಜಕೀಯ ನಾಯಕರು ಟೀಕಿಸಬಾರದು
– ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಶ್ರೀಗಳ ತೀಕ್ಷ್ಣ ಪ್ರತಿಕ್ರಿಯೆ

ರಾಯಚೂರು: ಕುಂಭಮೇಳ ಸಮಸ್ತ ಹಿಂದೂಗಳ ಶ್ರದ್ಧಾ ಉತ್ಸವವಾಗಿದೆ. ದೇಶ-ವಿದೇಶದಿಂದ ಲಕ್ಷಾಂತರ ಭಕ್ತರು ಪುಣ್ಯ ಸ್ನಾನಕ್ಕಾಗಿ ಮೇಳಕ್ಕೆ ಬರುತ್ತಿದ್ದಾರೆ. ಹೆಚ್ಚಿನ ಭಕ್ತರ ಜನಸಂದಣಿ ಆಗಿ ಕಾಲ್ತುಳಿತವಾಗಿ, ಸಾವುಗಳು ಸಂಭವಿಸಿವೆ. ಭಕ್ತರು ಸಹ ಸ್ವಯಂ ಜಾಗೃತರಾಗಿರಬೇಕು. ನಿಯಮ ಪಾಲನೆ ಜೊತೆಗೆ ತಾಳ್ಮೆಯಿಂದ ಇರಬೇಕು ಎಂದು ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಶ್ರೀಗಳು, ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಸದ್ಗತಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಅಂತ ಸಂತಾಪ ವ್ಯಕ್ತಪಡಿಸಿದರು. ಅಲ್ಲಿನ ಸರ್ಕಾರ ಸೂಕ್ತವಾಗಿ ತನಿಖೆ ನಡೆಸಿ, ಪರಿಹಾರದ ಜೊತೆಗೆ ಜಾಗೃತಿ ವಹಿಸಬೇಕು ಎಂದರು‌.

ಗಂಗಾ ಸ್ನಾನದಿಂದ ಬಡತನ ದೂರವಾಗಲ್ಲ ಎನ್ನುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಕುಂಭಮೇಳ ಧಾರ್ಮಿಕ ಶ್ರದ್ಧೆಯ ವಿಚಾರವಾಗಿದೆ. ರಾಜಕೀಯ ನಾಯಕರು ಇದನ್ನ ಟೀಕಿಸುವ ವಿಚಾರವಾಗಬಾರದು. ಗಂಗಾಸ್ನಾನದಿಂದ ಬಡತನ ‌ನೀಗುತ್ತೆ ಅಂತ ಯಾರು ಹೇಳಿಲ್ಲ. ಗಂಗಾ ಸ್ನಾನ ಎನ್ನುವುದು ಒಂದು ಭಾವನೆಗೆ ಒಳಪಟ್ಟಿದ್ದು. ಪವಿತ್ರತೆಗೆ ಕಾರಣವಾಗುತ್ತೆ, ನಮ್ಮ ಪಾಪಗಳು ಪರಿಹಾರವಾಗುತ್ತೆ. ದೇಹ ಮತ್ತು ಮನಸ್ಸಿನ ಶುದ್ಧಿಯಾಗುತ್ತೆ ಎಂದು ತಿಳಿಸಿದರು.

ಗಂಗಾ ಸ್ನಾನ ಮಾಡಿದ್ರೆ ಸಾಲ ಪರಿಹಾರವಾಗುವುದಿಲ್ಲ ಅಂತಾರೆ. ಹಾಗಾದ್ರೆ, ಏನ್ ಮಾಡಿದ್ರೆ ಸಾಲ ಪರಿಹಾರವಾಗುತ್ತೆ? ಸನಾತನ ಹಿಂದೂ ಧರ್ಮವನ್ನು ಟೀಕಿಸುವುದನ್ನೇ ಪ್ರಧಾನವಾಗಿ ಇಟ್ಟಿಕೊಳ್ಳಬಾರದು. ಬೇರೆ ಬೇರೆ ಕಾರ್ಯಕ್ರಮ ‌ಮಾಡುವುದರಿಂದ ಸಾಲ ಪರಿಹಾರವಾಗುತ್ತಾ? ವಿಧರ್ಮಿಯರು‌ ಮಾಡುವ ಕಾರ್ಯಗಳಿಂದ ಸಾಲ ಪರಿಹಾರವಾಗುತ್ತಾ? ಅದನ್ನ ಸಾಬೀತುಪಡಿಸಲಿ. ಇದು ಧಾರ್ಮಿಕ ವಿಚಾರ, ಇದನ್ನ ಟೀಕಿಸುವುದು ಅತ್ಯಂತ ಖಂಡನೀಯ ಎಂದು ಮಂತ್ರಾಲಯ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.

Share This Article