– ಎಲ್ಲ ಶಾಖಾ ಮಠಗಳಲ್ಲಿ ಸಂತ್ರಸ್ತರಿಗೆ ಆಶ್ರಯ ವ್ಯವಸ್ಥೆ
ರಾಯಚೂರು: ಉತ್ತರ ಕರ್ನಾಟಕ ಪ್ರವಾಹಕ್ಕೆ ರಾಜ್ಯದ ಜನತೆಯ ಮನ ಮಿಡಿಯುತ್ತಿದ್ದು, ಉದಾರತೆಯಿಂದ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದೀಗ ಮಠಗಳೂ ಸಹ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಮಂತ್ರಾಲಯದಿಂದ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂ. ನೀಡಲಾಗಿದೆ.
ಈಗಾಗಲೇ ಮಂತ್ರಾಲಯ ಮಠದಿಂದ 10 ಲಕ್ಷ ರೂ.ಗಳ ಸಹಾಯ ಧನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದ್ದು, ಸಂತ್ರಸ್ತರಿಗೆ ಎಲ್ಲ ರೀತಿಯ ಸಹಾಯವನ್ನು ಮಠದಿಂದ ಮಾಡಲು ಸಿದ್ಧರಿದ್ದೇವೆ. ಶ್ರೀ ಮಠದಿಂದ ಬಡವರಿಗೆ ಮನೆ ಕಟ್ಟಿಕೊಡಲು ಸಹ ಚಿಂತನೆ ನಡೆಸಲಾಗಿದೆ ಎಂದು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.
ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿವಿಧ ಶಾಖಾ ಮಠಗಳ ಮೂಲಕ ಸಂತ್ರಸ್ತರಿಗೆ ಆಹಾರ ಧಾನ್ಯ ವಿತರಣೆ ಆರಂಭವಾಗಿದೆ. ಸಂತ್ರಸ್ತರಿಗೆ ಮಂತ್ರಾಲಯ ಮಠದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು. ಅಲ್ಲದೆ, ಶಾಖಾ ಮಠಗಳಲ್ಲಿ ಸಂತ್ರಸ್ತರು ಆಶ್ರಯ ಪಡೆಯಲು ಸಹ ಎಲ್ಲ ವ್ಯವಸ್ಥೆಯನ್ನು ಮಾಡುವಂತೆ ಆಯಾ ಮಠಗಳಿಗೆ ಸೂಚಿಸಲಾಗಿದೆ ಎಂದು ಶ್ರೀ ಸುಬುಧೇಂದ್ರ ತೀರ್ಥರು ಸ್ಪಷ್ಟಪಡಿಸಿದ್ದಾರೆ.
ಚಾತುರ್ಮಾಸ ವ್ರತ ಕೈಗೊಂಡಿದ್ದು, ವ್ರತ ಪೂರ್ಣಗೊಳ್ಳಬೇಕಿದೆ. ಅಲ್ಲದೆ ಆಗಸ್ಟ್ 14 ರಿಂದ ರಾಯರ ಆರಾಧನಾ ಮಹೋತ್ಸವ ಹಮ್ಮಿಕೊಂಡಿರುವ ಹಿನ್ನೆಲೆ ಮಠದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಹೀಗಾಗಿ ಈ ಎಲ್ಲ ಕಾರ್ಯಗಳು ಮುಗಿದ ನಂತರ ಸಪ್ಟೆಂಬರ್ ನಲ್ಲಿ ಕೃಷ್ಣಾ ನದಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.