Districts
ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ

– ರಾಘವೇಂದ್ರ ಸ್ವಾಮಿಗಳ 399ನೇ ಪಟ್ಟಾಭಿಷೇಕ
– ರಾಯರ 425ನೇ ವರ್ಧಂತೋತ್ಸವಕ್ಕೆ ನಾದಹಾರ ಸಮರ್ಪಣೆ
ರಾಯಚೂರು: ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಈಗ ರಾಘವೇಂದ್ರ ಸ್ವಾಮಿಗಳ 399ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 425ನೇ ವರ್ಧಂತೋತ್ಸವದ ಸಂಭ್ರಮ ಮನೆ ಮಾಡಿದೆ. ಇಂದು ಗುರುರಾಯರ ಪಟ್ಟಾಭಿಷೇಕ ಉತ್ಸವ ಮಂತ್ರಾಲಯ ಮಠದಲ್ಲಿ ವಿಜೃಂಭಣೆಯಿಂದ ನಡೆಯಿತು.
ರಾಯರ ಪಾದುಕೆಗಳಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಜಿ ಪೂಜೆ ಸಲ್ಲಿಸಿದರು. ಮಠದ ಪ್ರಾಂಗಣದಲ್ಲಿ ರಥೋತ್ಸವ ನಡೆಯಿತು. ಇಂದಿನಿಂದ ಮಾರ್ಚ್ 2ರವರೆಗೆ ಏಳು ದಿನಗಳ ಕಾಲ ಅನೇಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ರಾಯರ ವರ್ಧಂತಿ ಉತ್ಸವದ ನಿಮಿತ್ತ ಮಾರ್ಚ್ 2ರಂದು ತಮಿಳುನಾಡು ಮೂಲದ ಭಕ್ತರಿಂದ ನಾದಹಾರ ಕಾರ್ಯಕ್ರಮ ನಡೆಯಲಿದೆ. 400ಕ್ಕೂ ಹೆಚ್ಚು ಕಲಾವಿದರು ಸುಮಾರು 16 ವರ್ಷಗಳಿಂದ ನಾದಹಾರ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಮಠದಲ್ಲಿ ಸಾವಿರಾರು ಭಕ್ತರಿಂದ ನಾದ ಸಮರ್ಪಣೆ ನಡೆಯಲಿದೆ. ಪ್ರತಿ ದಿನ ಸಂಜೆ ಸಂಗೀತ, ಭರತನಾಟ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗಣ್ಯರಿಗೆ ಸನ್ಮಾನ ನಡೆಯಲಿದೆ.
ಮಂತ್ರಾಲಯದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲಿರುವ ರಾಯರ ಶಾಖಾಮಠಗಳಲ್ಲೂ ಏಳು ದಿನಗಳ ಕಾಲ ಗುರುವೈಭವೋತ್ಸವ ಹಿನ್ನೆಲೆ ವಿಶೇಷ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಪ್ತರಾತ್ರೋತ್ಸವವನ್ನ ರಾಯರ ಭಕ್ತರು ಎಲ್ಲೆಡೆ ಸಂಭ್ರಮದಿಂದ ಆಚರಿಸುತಿದ್ದಾರೆ.
