ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಅದ್ಧೂರಿಯಾಗಿ ಮಹಾ ರಥೋತ್ಸವ ನಡೆಯಿತು. ಉತ್ತರಾರಾಧನೆ ಹಿನ್ನೆಲೆ ವಸಂತೋತ್ಸವ ಬಳಿಕ ಮಹಾರಥೋತ್ಸವ ಜರುಗಿಸಲಾಯಿತು.
ರಥೋತ್ಸವ ವೇಳೆ ಹೆಲಿಕ್ಯಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಠಿ ಮಾಡಲಾಯಿತು. ಮಠದ ಶ್ರೀಗಳು ಹೆಲಿಕಾಪ್ಟರ್‍ನಲ್ಲಿ ಕುಳಿತು ರಥಕ್ಕೆ ಪುಷ್ಪ ವೃಷ್ಠಿ ಮಾಡಿದರು. ರಥೋತ್ಸವ ಹಿನ್ನೆಲೆ ನೆರೆದಿದ್ದ ಸಾವಿರಾರು ಭಕ್ತರಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿದರು.
ಹಿಂದೂ ಧರ್ಮಕ್ಕೆ ಸಮಾನವಾದ ಧರ್ಮ ಜಗತ್ತಿನಲ್ಲಿ ಎಲ್ಲೂ ಇಲ್ಲ. ಹಿಂದೂ ಧರ್ಮ ಪರಮ ಪವಿತ್ರವಾದುದು. ಜಗತ್ತಿಗೆ ಸಮೃದ್ಧಿ ಹಾಗೂ ಶಾಂತಿಯ ಮಂತ್ರ ಕಲಿಸಿದ ಧರ್ಮವಿದು. ರಾಯರು ಅನೇಕ ಉದ್ಘ್ರಂಥ ಗಳನ್ನು ರಚಿಸುವ ಮೂಲಕ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಭಕ್ತಿ ಮಾರ್ಗದಿಂದ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ರಥದಲ್ಲಿ ಕುಳಿತು ಅನುಗ್ರಹ ಸಂದೇಶ ನೀಡಿದರು..
ವಿಶ್ವದ ಮಹಾಗುರುಗಳು ಸರ್ವ ಜಾತಿ ಜನಾಂಗದವರನ್ನು ಅನುಗ್ರಹಿಸುತ್ತಿದ್ದಾರೆ. ರಾಯರ ಸೇವೆ ಸಲ್ಲಿಸುವ ಮೂಲಕ ಅವರ ಅಂತರ್ಯಾಮಿಯಾದ ಪರಮಾತ್ಮನ ಅನುಗ್ರಹಿಸಬೇಕು.ರಾಯರು ಭಕ್ತಿ ಮಾರ್ಗದಿಂದ ದೇವರ ಅನುಗ್ರಹಕ್ಕೆ ಪಾತ್ರರಾಗುವ ಬಗೆಯನ್ನು ತಿಳಿಸಿಕೊಟ್ಟಿದ್ದಾರೆ. ಅಂಥ ಮಾರ್ಗ ಎಲ್ಲರಿಗೂ ದಾರಿದೀಪ ಎಂದರು.
ಶ್ರೀಮಠವು ಕೊರೊನಾ ಹಿನ್ನೆಲೆ ಆರಾಧನೆಯನ್ನು ಅತ್ಯಂತ ಸರಳವಾಗಿ ಆಚರಿಸಲು ಉದ್ದೇಶಿಸಿತ್ತು. ಆದರೆ ರಾಯರ ಭಕ್ತರು ಕೊರೊನಾಕ್ಕೆ ಹೆದರದೇ ಭಾರಿ ಸಂಖ್ಯೆಯಲ್ಲಿ ಆಗಮಿಸಿರುವುದು ಅವರೆಡೆಗೆ ಭಕ್ತರ ನಂಬಿಕೆ ವಿಶ್ವಾಸ ಬಯಲುಗೊಳಿಸಿದೆ. ರಾಯರು ತಮ್ಮ ಭಕ್ತರಿಗೆ ಬದುಕನ್ನು ಸರಿದಾರಿಯಲ್ಲಿ ನಡೆಸುವ ಶಕ್ತಿ ತುಂಬಲಿ. ಮಂತ್ರಾಲಯವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯಲಿದೆ ಎಂದರು.
350ನೇ ವರ್ಷದ ಆರಾಧನೆ ಅಂಗವಾಗಿ ಭಕ್ತರು ಕೊಡಮಾಡಿದ ದೇಣಿಗೆಯಿಂದ ವಜ್ರದ ಹಾರವನ್ನು ರಾಯರಿಗೆ ಸಮರ್ಪಿಸಲಾಗಿದೆ. ಭಕ್ತರ ಹಣದಿಂದಲೇ ಪಾದ ಕಾಣಿಕೆಯಿಂದ ರಾಮದೇವರ ಪೂಜೆ ಹಾಗೂ ಅಭಿಷೇಕಕ್ಕೆ ಬಳಕೆ ಮಾಡಲು 14 ಕೆಜಿ ತೂಕದ 20 ಕೋಟಿ ಮೌಲ್ಯದ ಚಿನ್ನದ ಎರಡು ಪಾತ್ರೆಗಳನ್ನ ರಾಯರಿಗೆ ಸಮರ್ಪಿಸಲಾಗಿದೆ. ಆರಾಧನೆ ಮೂಲಕ ಜಗತ್ತನ್ನು ಕವಿದಿರುವ ಕೊರೊನಾ ಉಪದ್ರವ ಕಳೆದು ಶಾಂತಿ ನೆಮ್ಮದಿ ನೆಲೆಸಲಿ ಅಂತ ಮಂತ್ರಾಲಯ ಶ್ರೀಗಳು ಹಾರೈಸಿದರು. ಇದನ್ನೂ ಓದಿ: ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಉತ್ತರಾರಾಧನೆ
ರಾಯರ ಆರಾಧನಾ ಮಹೋತ್ಸವದ ಸಂಭ್ರಮಕ್ಕೆ ಮಹಾರಥೋತ್ಸವ ಮೂಲಕ ತೆರೆಬಿದ್ದಿದೆ. ಆಗಸ್ಟ್ 27 ರ ವರೆಗೆ ಸಪ್ತರಾತ್ರೋತ್ಸವ ನಡೆಯಲಿದೆ. ಸಪ್ತರಾತ್ರೋತ್ಸವ ಅಂಗವಾಗಿ ಮಠದ ಪ್ರಾಂಗಣ ಹಾಗೂ ಹೊರಗಡೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯಲಿವೆ.ಇದನ್ನೂ ಓದಿ: ರಾಯರ ಆರಾಧನೆ- ಪಾದಯಾತ್ರೆ ಮೂಲಕ ಹರಿದು ಬಂತು ಭಕ್ತರ ದಂಡು