ಬೆಂಗಳೂರು: ಐಎಂಎ ವಂಚಕ ಮನ್ಸೂರ್ ಖಾನ್ ನನ್ನು 14 ದಿನಗಳ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಸಿಸಿಎಚ್ 1 ನ್ಯಾಯಾಲಯ ಆದೇಶ ನೀಡಿದೆ.
ಇಂದು ಮನ್ಸೂರ್ ಖಾನ್ ನನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಮನ್ಸೂರ್ ಖಾನ್‍ಗೆ ಎದೆನೋವು ಇದೆ. ಅಂಜಿಯೋಗ್ರಾಂ ಮಾಡಿಸಬೇಕಿದ್ದು, ಜಯದೇವ ಆಸ್ಪತ್ರೆ ಜೊತೆ ಎರಡನೇ ಒಪಿನಿಯನ್ (ಇನ್ನೊಂದು ಆಸ್ಪತ್ರೆಯ ವೈದ್ಯರ ಸಲಹೆ) ತೆಗೆದುಕೊಳ್ಳಬೇಕಿದೆ. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಕಕ್ಷಿದಾರರ ಪ್ರಾಣಕ್ಕೆ ಅಪಾಯವಿದೆ ಎಂದು ಮನ್ಸೂರ್ ಖಾನ್ ಪರ ವಕೀಲರು ವಾದ ಮಂಡಿಸಿದ್ದರು.
Advertisement
Advertisement
ನಮ್ಮ ಬಳಿ ಹಲವು ಸಾಕ್ಷ್ಯಾಧಾರಗಳಿದ್ದು, ಆನಾರೋಗ್ಯದ ನೆಪವೊಡ್ಡಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಜಯದೇವ ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಇಡಿ ಪರ ವಕೀಲರು ವಾದಿಸಿದ್ದರು. ಬಳಿಕ ಎಸ್‍ಐಟಿ ಪರ ವಕೀಲರು, ನ್ಯಾಯಾಂಗ ಬಂಧನಕ್ಕೆ ಕೊಟ್ಟರೂ ಯಾರೂ ಭೇಟಿಯಾಗದಂತೆ ಆದೇಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.
Advertisement
ವಾದಗಳನ್ನು ಆಲಿಸಿದ ನ್ಯಾಯಾಲಯ, ಮನ್ಸೂರ್ ಖಾನ್ ನನ್ನು 14 ದಿನ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಆದೇಶ ನೀಡಿತು. ನ್ಯಾಯಾಂಗ ಬಂಧನದಲ್ಲಿ ವಕೀಲರು ಹೊರತುಪಡಿಸಿ ಕುಟುಂಬಸ್ಥರು ಸೇರಿದಂತೆ ಬೇರೆ ಯಾರು ಭೇಟಿಯಾಗುವಂತಿಲ್ಲ. ಜಯದೇವ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಿ, ಅಂಜಿಯೋಗ್ರಾಂ ಬಗ್ಗೆ ಎರಡನೇ ಒಪಿನಿಯನ್ ಕೇಳಲು ನ್ಯಾಯಾಲಯ ಸೂಚಿಸಿದೆ. ಮನ್ಸೂರ್ ಖಾನ್ ವಿಕ್ಟೋರಿಯಾ ಆಸ್ಪತ್ರೆಯ ಚಿಕಿತ್ಸೆಗೆ ಮನ್ಸೂರ್ ಪರ ವಕೀಲರು ಮನವಿ ಮಾಡಿಕೊಂಡಿದ್ದರು.