Connect with us

ನಾಲ್ಕನೇಯ ಬಾರಿ ಗೋವಾ ಸಿಎಂ ಆದ ಪರಿಕ್ಕರ್: ಪ್ರಮಾಣವಚನದ ವೇಳೆ ಸಣ್ಣ ಎಡವಟ್ಟು

ನಾಲ್ಕನೇಯ ಬಾರಿ ಗೋವಾ ಸಿಎಂ ಆದ ಪರಿಕ್ಕರ್: ಪ್ರಮಾಣವಚನದ ವೇಳೆ ಸಣ್ಣ ಎಡವಟ್ಟು

ಪಣಜಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಅತಂತ್ರವಾಗಿದ್ದ ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಗೋವಾದ ನೂತನ ಸಿಎಂ ಆಗಿ ಮನೋಹರ್ ಪರಿಕ್ಕರ್ ಸಂಜೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪರಿಕ್ಕರ್ ಜೊತೆಗೆ 8 ಮಂದಿ ಸಚಿವರು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ರು.

ಪರಿಕ್ಕರ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ಸಿಎಂ ಸಣ್ಣ ಎಡವಟ್ಟು ಮಾಡಿಕೊಂಡಿದ್ದರು. ಪರಿಕ್ಕರ್ ಮೊದಲು ‘ಮಂತ್ರಿ’ಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆ ಬಳಿಕ ಮತ್ತೆ ರಾಜ್ಯಪಾಲರ ಬಳಿ ತೆರಳಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕಾರ ಮಾಡಲು ಅನುಮತಿ ಪಡೆದು ಮತ್ತೆ ‘ಮುಖ್ಯಮಂತ್ರಿ’ಯಾಗಿ ಪ್ರಮಾಣ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗಿಯಾಗಿದ್ರು.

ಇದಕ್ಕೂ ಮೊದಲು ಗೋವಾ ರಾಜ್ಯಪಾಲರು ಪರಿಕ್ಕರ್ ಅವರಿಗೆ ಸರ್ಕಾರ ರಚನೆಗೆ ಆಹ್ವಾನಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯುತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಖೇಹರ್ ಪೀಠ, ಮೊದಲು ನೀವೇಕೆ ರಾಜ್ಯಪಾಲರನ್ನು ಸರ್ಕಾರ ರಚಿಸಲು ಹಕ್ಕು ಮಂಡಿಸಲಿಲ್ಲ? ಇಂತಹ ಸಂದರ್ಭದಲ್ಲಿ ಒಂದು ಪಕ್ಷಕ್ಕೆ ಮಾತ್ರ ಸಂಖ್ಯಾಬಲ ಇದ್ದಿದ್ದರಿಂದ ಕಾಂಗ್ರೆಸ್‍ಗೆ ಆಹ್ವಾನ ನೀಡುವ ಪ್ರಶ್ನೆಯೇ ಇಲ್ಲ. ನಿಮಗೆ ಸಂಖ್ಯಾಬಲವಿದ್ದರೆ ಅದನ್ನು ಈಗಲೇ ಸಾಬೀತುಪಡಿಸಿ ಎಂದು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಸಿಂಗ್ವಿ ಅವರಿಗೆ ಪೀಠ ಪ್ರಶ್ನಿಸಿತು.

ಪರಿಕ್ಕರ್ ಹಕ್ಕು ಮಂಡನೆಯನ್ನು ತಿರಸ್ಕಾರ ಮಾಡಲು ನಿಮ್ಮ ಬಳಿ ಬಹುಮತ ಸಂಖ್ಯೆ ಇಲ್ಲ. ಅದಕ್ಕಾಗಿ ನಿಮ್ಮನ್ನ ಆಹ್ವಾನಿಸಿಲ್ಲ ಅಂತ ಅರ್ಜಿಯನ್ನ ವಜಾ ಮಾಡಿದ್ರು. ಆದ್ರೆ ಮಾರ್ಚ್ 16ರಂದು ಅಂದರೆ 48 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಪರಿಕ್ಕರ್ ಅವರಿಗೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ.

4ನೇ ಬಾರಿ ಸಿಎಂ: ಪರಿಕ್ಕರ್ ಈ ಹಿಂದೆ 2000, 2002 ನಂತರ 2012ರಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 2012ರ ಮಾರ್ಚ್ 19 ರಿಂದ 2014ರ ನವೆಂಬರ್ 8 ರವರೆಗೆ ಗೋವಾ ಮುಖ್ಯಮಂತ್ರಿಯಾಗಿದ್ದರು. 2014 ನವೆಂಬರ್ ನಿಂದ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ರಾಜೀನಾಮೆಯ ಬಳಿಕ ಲಕ್ಷ್ಮಿಕಾಂತ್ ಪರ್ಸೇಕರ್ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಎಲ್ಲಿಂದ ಸ್ಪರ್ಧೆ?: ಗೋವಾದಲ್ಲಿ ವಿಧಾನ ಸಭೆ ಮಾತ್ರ ಇದ್ದು, ವಿಧಾನ ಪರಿಷತ್ ಇಲ್ಲ. ಹೀಗಾಗಿ ಮನೋಹರ್ ಪರಿಕ್ಕರ್ ಚುನಾವಣೆಗೆ ನಿಲ್ಲುವುದು ಅನಿವಾರ್ಯವಾಗಿದೆ. ಈ ಮೊದಲು ಪರಿಕ್ಕರ್ ಮಾಫ್ಸಾದಿಂದ ಸ್ಪರ್ಧಿಸಲಿದ್ದಾರೆ. ಪರಿಕ್ಕರ್‍ಗಾಗಿ ಮಾಜಿ ಉಪ ಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸುದ್ದಿಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸದಾನಂದ ತಾನವಾಡೆ ಪ್ರತಿಕ್ರಿಯಿಸಿ, ಮಾಫ್ಸಾದಿಂದ ಮನೋಹರ್ ಪರಿಕ್ಕರ್ ಕಣಕ್ಕೆ ಇಳಿಯುವುದಿಲ್ಲ ಎಂದು ತಿಳಿಸಿದ್ದಾರೆ. ಈಗ ಬಿಜೆಪಿ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ರಾಜಧಾನಿ ಪಣಜಿಯಿಂದ ಪರಿಕ್ಕರ್ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಣಿಪುರದಲ್ಲಿ ನಾಳೆ ಪ್ರಮಾಣವಚನ: ಮಣಿಪುರದಲ್ಲೂ ಬಿಜೆಪಿ ಸರ್ಕಾರ ರಚನೆಗೆ ಗವರ್ನರ್ ನಜ್ಮಾ ಹೆಪ್ತುಲ್ಲಾ ಆಹ್ವಾನ ನೀಡಿದ್ದು, ನಾಳೆ ಮಧ್ಯಾಹ್ನ 1.30ಕ್ಕೆ ಸಮಯ ನಿಗದಿಯಾಗಿದೆ. ಮಣಿಪುರದಲ್ಲಿ ಮೊದಲ ಬಿಜೆಪಿ ಸರ್ಕಾರದ ಪ್ರಪ್ರಥಮ ಸಿಎಂ ಆಗಿ ಬೀರೇನ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

https://www.youtube.com/watch?v=X1k4hWLA2TI

Advertisement
Advertisement