ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕಳೆದ 7 ತಿಂಗಳಿನಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆ (ಮೆದೋಜೀರಕ ಗೃಂಥಿ ಸಮಸ್ಯೆ)ಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಮುಖ್ಯಮಂತ್ರಿ ಸ್ಥಾನವನ್ನು ತಾತ್ಕಾಲಿಕವಾಗಿ ಬೇರೆಯವರಿಗೆ ಬಿಟ್ಟುಕೊಡುವುದರ ಕುರಿತು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಹಲವು ವಾರಗಳ ಚಿಕಿತ್ಸೆ ಬಳಿಕ ಸೆಪ್ಟೆಂಬರ್ 6ರಂದು ಪರಿಕ್ಕರ್ ಅವರು ಅಮೆರಿಕಾದಿಂದ ವಾಪಸ್ಸಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕ್ಯಾಂಡೋಲಿಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯವರ ಸಲಹೆಯಂತೆ ಪರಿಕ್ಕರ್ ಅವರನ್ನು ಹೆಚ್ಚಿನ ಮೆಡಿಕಲ್ ಟೆಸ್ಟ್ ಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪರಿಕ್ಕರ್ ಅವರನ್ನು ವಿಮಾನದ ಮೂಲಕ ದೆಹಲಿಗೆ ಕಳುಹಿಸಲಾಗಿದೆ. ಸದ್ಯ ಮೋದಿ ಹಾಗೂ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಅವರು ಪರಿಕ್ಕರ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಆರೋಗ್ಯ ವಿಚಾರಿಸುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.
Goa Chief Minister Manohar Parrikar travel to Delhi today for health checkup at All India Institute of Medical Sciences. (file pic) pic.twitter.com/si3tmT3XSm
— ANI (@ANI) September 15, 2018
ಮೂಲಗಳ ಪ್ರಕಾರ, ಅಮಿತ್ ಶಾ ಅವರು ಈಗಾಗಲೇ ಪರಿಕ್ಕರ್ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪರಿಕ್ಕರ್ ಅವರ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ನಿರ್ವಹಿಸುವ ಹೊಣೆಯನ್ನು ಯಾರಿಗೆ ನೀಡಬೇಕೆಂಬ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಸೋಮವಾರ ಪಕ್ಷದ ಉಸ್ತುವಾರಿ ವಿಜಯ್ ಪುರಾಣಿಕ್ ಹಾಗೂ ಸಂಯೋಜಕ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಇವರಿಬ್ಬರನ್ನು ಗೋವಾಗೆ ಕಳುಹಿಸಲು ತೀರ್ಮಾನಿಸಿದೆ. ಇದೇ ವೇಳೆ ಪಕ್ಷದ ಹಿರಿಯರು ಕೂಡ ಭಾಗಿಯಾಗಲಿದ್ದಾರೆ ಎಂಬುದಾಗಿ ವರದಿಯಾಗಿದೆ.
ಸದ್ಯ ಮಹಾರಾಷ್ಟ್ರವಾದಿ ಗೋಮಾಂಟಕ್ ಪಕ್ಷದ(ಎಂಜಿಪಿ) ಸುದಿನ್ ಧವಲೀಕರ್ ಅವರಿಗೆ ತಾತ್ಕಾಲಿಕವಾಗಿ ಅಂದರೆ 18 ತಿಂಗಳುಗಳ ಕಾಲ ಸರ್ಕಾರದ ಜವಾಬ್ದಾರಿಯನ್ನು ನೀಡಲಾಗುವುದು ಅಂತ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಆದ್ರೆ ಈ ಸಂಬಂಧ ಇದೂವರೆಗೂ ಯಾವುದೇ ಚರ್ಚೆ ನಡೆದಿಲ್ಲ. ಈ ಬಗ್ಗೆ ಸೋಮವಾರ ಬಿಜೆಪಿ ಉಸ್ತುವಾರಿಯವರು ಸಮ್ಮಿಶ್ರ ಸರ್ಕಾರದ ಶಾಸಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ತೀರ್ಮಾನಕ್ಕೆ ಬರುವುದಾಗಿ ಪಕ್ಷದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ದಿವಾಕರ್ ಅವರನ್ನು ಮಾತನಾಡಿಸಿದಾಗ, ಪರಿಕ್ಕರ್ ಅವರನ್ನು ನಾನು ಭೇಟಿ ಆಗಿದ್ದೆ ಆದ್ರೆ ಅವರು ಈ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ ಅಂತ ಹೇಳಿದ್ದಾರೆ.
ಏನಿದು ಪ್ಯಾಂಕ್ರಿಯಾಸ್ ಕಾಯಿಲೆ?:
ಪ್ಯಾಂಕ್ರಿಯಾಸ್ ಮಾನವ ದೇಹದ ಪ್ರಮುಖ ಅಂಗವಾಗಿದ್ದು, ಎರಡು ಪ್ರಮುಖ ಹಾರ್ಮೋನ್ ಗಳಾದ ಇನ್ಸುಲಿನ್, ಗ್ಲೂಕಾಗಾನ್ ಗಳ ಉತ್ಪಾದನೆ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೊಣೆಗಾರಿಕೆ ಹೊಂದಿದೆ. ಹೊಟ್ಟೆಯ ಭಾಗದಲ್ಲಿ ಕರುಳು ಮತ್ತು ಜಠರದ ಆಳವಾದ ಹಿಂಭಾಗದಲ್ಲಿರುವ ಪ್ಯಾಂಕ್ರಿಯಾಸ್ ಗಳನ್ನು ಕಾಡುವ ಹಲವಾರು ರೋಗಗಳ ಪೈಕಿ ಕ್ಯಾನ್ಸರ್ ಅತ್ಯಂತ ಮಾರಕವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv