ನವದೆಹಲಿ: ಭಾರತದ ಮಾಜಿ ಪ್ರಧಾನಿ, ಕಾಂಗ್ರೆಸ್ ಹಿರಿಯ ನಾಯಕ ಮನಮೋಹನ್ ಸಿಂಗ್ (Manmohan Singh) ನಿಧನರಾಗಿದ್ದಾರೆ. ದೇಶದ ಗಣ್ಯಾತಿಗಣ್ಯರು ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಏಳು ದಿನ ಶೋಕಾಚರಣೆಗೆ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಚಿವರು, ಸಂಸದರು, ಹಿರಿಯ ರಾಜಕಾರಣಿಗಳು ಅವರ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ. ಇಂದು ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ವಯೋಸಹಜ ಅನಾರೋಗ್ಯ ಕಾರಣದಿಂದ ಕೊನೆಯುಸಿರೆಳೆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರ ಇಂದು ನಡೆಯಲಿದೆ. ದೆಹಲಿಯಲ್ಲಿರುವ ನಿಗಮ್ ಬೋಧ ಘಾಟ್‌ನಲ್ಲಿ ಬೆಳಗ್ಗೆ 11:45 ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಮನಮೋಹನ್ ಸಿಂಗ್ ನನ್ನ ಸ್ನೇಹಿತ, ತತ್ವಜ್ಞಾನಿ, ಮಾರ್ಗದರ್ಶಕ – ಸೋನಿಯಾ ಗಾಂಧಿ ಬಣ್ಣನೆ
ಮನಮೋಹನ್ ಸಿಂಗ್ ಅಂತ್ಯಕ್ರಿಯೆ ನಡೆಸುವ ಬಗ್ಗೆ ಕೇಂದ್ರ ಗೃಹ ಇಲಾಖೆಯು ರಕ್ಷಣಾ ಇಲಾಖೆಗೆ ಪತ್ರ ಬರೆದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಸಕಲ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದೆ.
ಸದ್ಯ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಇಡಲಾಗಿದ್ದು, ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗೆ 8 ಗಂಟೆಗೆ ದೆಹಲಿಯಲ್ಲಿರುವ ಎಐಸಿಸಿ ಕಚೇರಿಗೆ ಪಾರ್ಥಿವ ಶರೀರವನ್ನು ಶಿಫ್ಟ್ ಮಾಡಲಿದ್ದು 8:30 ರಿಂದ 9:30 ರ ವರೆಗೂ ಸಾರ್ವಜನಿಕರು ಮತ್ತು ಕಾರ್ಯಕರ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. 9:30 ಬಳಿಕ ಮನಮೋಹನ್ ಸಿಂಗ್ ಅವರ ಅಂತಿಮ ಯಾತ್ರೆ ಆರಂಭವಾಗಲಿದೆ. ಇದನ್ನೂ ಓದಿ: ಅಂತ್ಯಕ್ರಿಯೆ ಸ್ಥಳದಲ್ಲೇ ತಲೆಯೆತ್ತಲಿದೆಯೇ ಸಿಂಗ್ ಸ್ಮಾರಕ? – ಪ್ರಧಾನಿ ಮೋದಿಗೆ ಕಾಂಗ್ರೆಸ್ ಪತ್ರ!
ಬಳಿಕ ಬೆಳಗ್ಗೆ 11:45 ರ ವೇಳೆ ಸಿಖ್ ಧಾರ್ಮಿಕ ವಿಧಿವಿಧಾನಗಳ ಮೂಲಕ ಧಾರ್ಮಿಕ ಪ್ರಕ್ರಿಯೆ ನಡೆಯಲಿದ್ದು, ಬಳಿಕ ಸರ್ಕಾರಿ ಗೌರವಗಳೊಂದಿಗೆ ಸಿಂಗ್ ಅಂತ್ಯಕ್ರಿಯೆ ನಡೆಯಲಿದೆ.