‘ಭಾರತ್ ಮಾತಾ ಕೀ ಜೈ’ ಘೋಷಣೆ ದುರ್ಬಳಕೆಯಾಗುತ್ತಿದೆ- ಮನಮೋಹನ್ ಸಿಂಗ್ ಕಳವಳ

Public TV
1 Min Read
Manmohan Singh A

ನವದೆಹಲಿ: ದೇಶದ ಜನರನ್ನು ಭಾವನಾತ್ಮಕ ಒಂದುಗೂಡಿಸಿದ್ದ, ದೇಶ ನಿರ್ಮಿಸುವ ಸಲುವಾಗಿ ಬಳಸಲಾಗುತ್ತಿದ್ದ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಘೋಷಣೆ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಇಂಡಿಯಾ ಹೆಬಿಟೆಟ್ ಸೆಂಟರ್‍ನಲ್ಲಿ ಪ್ರೊ. ಕೆ.ಈ.ರಾಧಾಕೃಷ್ಣ ಅನುವಾದಿಸಿದ ‘ಯಾರು ಭಾರತ ಮಾತೆ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಇತಿಹಾಸ ಓದದವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನೆಹರು ಒಬ್ಬ ಇತಿಹಾಸಕಾರರು. ನವ ಭಾರತ ಕಟ್ಟುವಲ್ಲಿ ಅವರ ಪಾತ್ರ ಮಹತ್ವದ್ದು ಎಂದರು.

neharu

ವಿಶ್ವ ವೇದಿಕೆಗಳಲ್ಲಿ ಭಾರತವು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿಂತಿರುವುದರ ಹಿಂದೆ ಮತ್ತು ಜಗತ್ತಿನ ಪ್ರಮುಖ ಶಕ್ತಿಯಾಗಿ ಕಾಣುತ್ತಿರುವುದರ ಹಿಂದೆ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಪರಿಶ್ರಮವಿದೆ. ಅವರು ನವ ಭಾರತದ ಶಿಲ್ಪಿ ಎಂದು ಮನಮೋಹನ್ ಸಿಂಗ್ ಬಣ್ಣಿಸಿದರು.

ಪ್ರಜಾಪ್ರಭುತ್ವ ಅಳವಡಿಸಿಕೊಂಡಿದ್ದ ಕಾಲದಲ್ಲಿ ಅತ್ಯಂತ ಕಷ್ಟದ ದಿನಗಳಲ್ಲಿ, ಇನ್ನಷ್ಟೇ ದೇಶ ನಿರ್ಮಾಣವಾಗಬೇಕಿದ್ದ ಕಾಲಘಟ್ಟದಲ್ಲಿ ನೆಹರು ವಿಭಿನ್ನ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನಗಳೊಂದಿಗೆ ಈ ದೇಶವನ್ನು ಮುನ್ನಡೆಸಿದ್ದಾರೆ. ನವ ಭಾರತದ ನಿರ್ಮಾಣಕ್ಕಾಗಿ ನೆಹರು ಹಲವು ವಿಶ್ವವಿದ್ಯಾಲಯಗಳಿಗೆ, ಅಕಾಡೆಮಿಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ಆದರೆ ಅವರು ಅಂದುಕೊಂಡ ದೇಶವಾಗಿ ಇಂದು ಭಾರತ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲಕ್ಷಾಂತರ ಜನರು, ನಾಗರಿಕರ ಹೊರತಾದ ಯುದ್ಧೋನ್ಮಾದದ ಮತ್ತು ಸಂಪೂರ್ಣ ಭಾವನಾತ್ಮಕ ಕಲ್ಪನೆಯ ಭಾರತ ಕಟ್ಟುವ ಸಲುವಾಗಿ ರಾಷ್ಟ್ರವಾದ ಮತ್ತು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾರು ಭಾರತ ಮಾತೆ ಎನ್ನುವ ಪುಸ್ತಕ ಅತ್ಯಂತ ಪ್ರಸ್ತುತ ಎನಿಸಿದೆ. ಕನ್ನಡಕ್ಕೆ ಅನುವಾದವಾಗಿರುವುದು ಖುಷಿಯಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *