ನವದೆಹಲಿ: ದ್ವೇಷ ಮತ್ತು ಅಸಂಸದೀಯ ಭಾಷಣಗಳನ್ನು ಮಾಡುವ ಮೂಲಕ ನರೇಂದ್ರ ಮೋದಿ (Narendra Modi) ಪ್ರಧಾನಮಂತ್ರಿ ಕಚೇರಿಯ ಘನತೆಯನ್ನು ಕಡಿಮೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan singh) ಆರೋಪಿಸಿದ್ದಾರೆ.
ಏಳನೇ ಹಂತದ ಮತದಾನದ ಹಿನ್ನೆಲೆ ಪಂಜಾಬ್ (Punjab) ಜನರಿಗೆ ಪತ್ರ ಬರೆದಿರುವ ಸಿಂಗ್, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ದೇಶದ ಸಂಪತ್ತನ್ನು ಹಂಚಲಾಗುತ್ತದೆ ಎಂದು ರಾಜಸ್ಥಾನದಲ್ಲಿ (Rajasthan) ಆರೋಪಿಸಿದ ಪ್ರಧಾನಿ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಪ್ರಧಾನಿ ಮೋದಿ ಸ್ವಭಾವದಲ್ಲಿ ಸಂಪೂರ್ಣವಾಗಿ ವಿಭಜಿಸುವ ಅತ್ಯಂತ ಕೆಟ್ಟ ರೂಪದ ದ್ವೇಷ ಭಾಷಣಗಳಲ್ಲಿ ತೊಡಗಿದ್ದಾರೆ ಎಂದು ಕುಟುಕಿದ್ದಾರೆ.
2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದರು. ಆದರೆ ಕಳೆದ 10 ವರ್ಷದಲ್ಲಿ ರೈತರ ಆದಾಯ ಕುಗ್ಗಿದೆ, ರೈತರ ರಾಷ್ಟ್ರೀಯ ಸರಾಸರಿ ಆದಾಯವು ದಿನಕ್ಕೆ ಅತ್ಯಲ್ಪ 27 ರೂ. ಆಗಿದೆ. ಪ್ರತಿ ರೈತನ ಸರಾಸರಿ ಸಾಲವು 27,000 ರೂ. ಆಗಿದೆ. ಕೃಷಿ ವಸ್ತುಗಳ ಮೇಲೆ ಜಿಎಸ್‍ಟಿ ಹಾಕಲಾಗುತ್ತಿದೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಡೆತ್‌ನೋಟ್‌ನಲ್ಲಿರುವ ನಾಗರಾಜ್ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್
ಕಳೆದ 10 ವರ್ಷಗಳಲ್ಲಿ, ರಾಷ್ಟ್ರದ ಆರ್ಥಿಕತೆಯು ಊಹಿಸಲಾಗದ ಪ್ರಕ್ಷುಬ್ಧತೆಯನ್ನು ಕಂಡಿದೆ. ನೋಟು ಅಮಾನ್ಯೀಕರಣದ ಅನಾಹುತ, ದೋಷಪೂರಿತ ಜಿಎಸ್‍ಟಿ ಜಾರಿ, ಕೋವಿಡ್ -19 ಸಾಂಕ್ರಾಮಿಕ ಶೋಚನೀಯ ಪರಿಸ್ಥಿತಿಗೆ ಕಾರಣವಾಯಿತು. ರೈತರ ಪ್ರತಿಭಟನೆಯಲ್ಲಿ 750 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದರು. ಹೀನಾಯವಾಗಿ ರೈತರನ್ನು ನಡೆಸಿಕೊಂಡರು ಎಂದು ಮನಮೋಹನ್ ಸಿಂಗ್ ಕಿಡಿಕಾರಿದ್ದಾರೆ.