ನವದೆಹಲಿ: 2012 ರಲ್ಲಿ ಪ್ರಣಬ್ ಮುಖರ್ಜಿ (Pranab Mukherjee) ಅವರನ್ನು ಪ್ರಧಾನಿಯಾಗಿ ನೇಮಿಸಿದ್ದರೆ 2014 ರಲ್ಲಿ ಯುಪಿಎ-3 ಅಧಿಕಾರಕ್ಕೆ ಖಂಡಿತ ಬರುತ್ತಿತ್ತು ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyar) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ 2012ರಲ್ಲಿ ರಾಷ್ಟ್ರಪತಿ ಆಯ್ಕೆ ನಡೆದಾಗ ಅಂದಿನ ಪ್ರಧಾನಿಯಾಗಿದ್ದ ಡಾ। ಮನಮೋಹನ್ ಸಿಂಗ್ (Manmohan Singh) ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಬೇಕಿತ್ತು ಹಾಗೂ ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿ ಹುದ್ದೆ ನೀಡಬೇಕಿತ್ತು ಎಂದು ಹೇಳಿದರು.
2012ರಲ್ಲಿ ಸೋನಿಯಾ ಗಾಂಧಿ (Sonia Gandhi) ಅವರು ಪ್ರಣಬ್‌ರನ್ನು ಕರೆದು ನೀವು ಪ್ರಧಾನಿಯಾಗಬಹುದು ಎಂದು ಆಫರ್ ನೀಡಿದ್ದರು. ಸೋನಿಯಾ ನೀಡಿದ್ದ ಆಫರ್ ನೋಡಿ ನನಗೆ ಅಚ್ಚರಿಯಾಗಿದೆ ಎಂದು ಪ್ರಣಬ್ ಅವರು ನನ್ನ ಬಳಿ ಹೇಳಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಹೆತ್ತ ಮಗು ತನ್ನ ಬಳಿಯಿಲ್ಲದಿದ್ದರೂ ಅನಾಥ ಮಕ್ಕಳಿಗೆ ಸಹಾಯ – ಅತುಲ್ ಸಮಾಜಮುಖಿ ಕಾರ್ಯಕ್ಕೆ ಮನಸೋತ ಸ್ನೇಹಿತರು
ನಾನು ಪ್ರಣಬ್ ಪ್ರಧಾನಿಯಾಗುತ್ತಾರೆ ಎಂದುಕೊಂಡಿದ್ದೆ. ಆದರೆ ನನ್ನ ನಿರೀಕ್ಷೆ ಉಲ್ಟಾ ಆಯ್ತು. ಪ್ರಣಬ್ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಮುಂದುವರಿದರು. ಪ್ರಣಬ್ ಅತ್ಯುತ್ತಮ ಕೆಲಸಗಾರರಾಗಿದ್ದರಿಂದ ಪ್ರಧಾನಿ ಹುದ್ದೆ ನೀಡಬೇಕಿತ್ತು.ಆಡಳಿತದಲ್ಲಿ ಅನುಭವಿ ಆಗಿದ್ದ ಡಾ। ಸಿಂಗ್ ಅವರಿಗೆ ರಾಷ್ಟ್ರಪತಿ ಹುದ್ದೆ ನೀಡಬೇಕಿತ್ತು ಎಂದು ಅಯ್ಯರ್ ಹೇಳಿದರು.
ಮಣಿಶಂಕರ್ ಅಯ್ಯರ್ ಅವರು A MAVERICK IN POLITICS: 1999-2024 ಪುಸ್ತಕ ಬರೆದಿದ್ದು, ಈ ಪುಸ್ತಕದಲ್ಲಿ ರಾಜಕೀಯ ನಾಯಕರ ಒಡನಾಟ, ಗಾಂಧಿ ಕುಟುಂಬದ ಜೊತೆಗಿನ ಸಂಬಂಧದ ಬಗ್ಗೆ ವಿವರಿಸಿದ್ದಾರೆ.