– ಮೂವರು ಮುಸ್ಲಿಮರು ಬಿಸ್ಮಿಲ್ಲಾ, ಬಿಸ್ಮಿಲ್ಲಾ ಅಂತಿದ್ರು ಎಂದ ಪಲ್ಲವಿ
ಶ್ರೀನಗರ: ಕಾಶ್ಮೀರಕ್ಕೆ (Jammu and Kashmir) ಹೋಗುವುದು ನನ್ನ ಗಂಡನ ಕನಸಾಗಿತ್ತು. ಈಗ ಯಾಕಾದ್ರೂ ಬಂದಿದ್ದೇವೋ ಏನೋ ಈ ಕರ್ಮಕ್ಕೆ ಎಂದು ಉಗ್ರರ ದಾಳಿಯಲ್ಲಿ (Terrorist Attack) ಸಾವಿಗೀಡಾದ ಶಿವಮೊಗ್ಗ (Shivamogga) ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯ ಪತ್ನಿ ಪಲ್ಲವಿ ಕಣ್ಣೀರಿಟ್ಟಿದ್ದಾರೆ.
ನಾವು ಒಂದು 500 ಜನ ಇದ್ವಿ. ಮಿನಿ ಸ್ವಿಡ್ಜರ್‌ಲ್ಯಾಂಡ್ ಅಂತಾ ಒಂದು ಪಾಯಿಂಟ್ ಅದು. ಆಗಷ್ಟೇ ಹೋಗಿ ಕುದುರೆ ಇಳಿದಿದ್ವಿ. ನನ್ನ ಮಗ ಬೆಳಗ್ಗೆಯಿಂದ ಏನೂ ತಿಂದಿರಲಿಲ್ಲ. ಅಲ್ಲೇನಾದ್ರೂ ತಗೊಳೋಕೆ ಅಂತಾ ನಮ್ಮ ಮನೆಯವರು, ಅಂಗಡಿಯವರ ಬಳಿ ವಿಚಾರಿಸಲು ಹೋದರು. ನನ್ನ ಮಗನ ಕರೆಯಲು ನಾನು ಹೋದೆ. ಗುಂಡಿನ ತರ ಸೌಂಡ್ ಬಂತು. ನಾವೆಲ್ಲಾ ಆರ್ಮಿಯವರು ಇರಬೇಕು ಅಂನ್ಕೊಂಡ್ವಿ. ನಾನು ಈ ಕಡೆ ತಿರುಗಿ ನೋಡೋ ಅಷ್ಟರಲ್ಲಿ ಬೇರೆಯವರೆಲ್ಲಾ ಓಡುತ್ತಿದ್ದರು. ನನ್ನ ಮಗನ ಕರೆದುಕೊಳ್ಳೋಕೆ ಅಂತಾ ನೋಡ್ತಿನಿ, ಅಷ್ಟರಲ್ಲಿ ನಮ್ಮ ಮನೆಯವರು ರಕ್ತದ ಮಡುವಿನಲ್ಲಿ ಇದ್ದರು. ಅವರು ತಲೆಗೆ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಮೂವರು ಮುಸ್ಲಿಮರು ಬಿಸ್ಮಿಲ್ಲಾ, ಬಿಸ್ಮಿಲ್ಲಾ ಅಂತಿದ್ರು. ನಾನು ಅಲ್ಲೇ ಇದ್ದ ಭಯೋತ್ಪಾದಕನ ಬಳಿ ನನ್ನ ಪತಿಯನ್ನು ಸಾಯಿಸಿದ್ದೀರಾ, ನನ್ನನ್ನು ಸಾಯಿಸಿ ಎಂದು ನಾನು ಕೇಳಿದೆ. ನನ್ನ ಮಗ ಏ ನಾಯಿ… ನನ್ನ ತಂದೆಯನ್ನು ಕೊಂದೆಯಲ್ಲಾ, ನಮ್ಮನ್ನು ಕೊಂದುಬಿಡು ಎಂದ.. ಇಲ್ಲ ನಿಮ್ಮನ್ನು ಸಾಯಿಸಲ್ಲ. ಮೋದಿಗೆ ಹೋಗಿ ಹೇಳು ಎಂದು ಹೋದ. ನಮ್ಮ ಎದುರಿಗೆ ಓಡಾಡುತ್ತಿದ್ದರು. ಯಾರೂ ಇರಲಿಲ್ಲ.. ಸೈನಿಕರೂ ಯಾರೂ ಇರಲಿಲ್ಲ. ಮಾಮೂಲಿ ಬಟ್ಟೆಯಲ್ಲಿ ಇದ್ದರು. ನವ ದಂಪತಿ ಒಬ್ಬರು ಬಂದಿದ್ದರು. ಗಂಡಸರಿಗೆ ಮಾತ್ರ ಹೊಡೆದರು. ಹೆಂಗಸರು, ಮಕ್ಕಳಿಗೆ ಏನೂ ಆಗಿಲ್ಲ.
ನಮಗೆ ನಮ್ಮ ಮನೆಯವರ ಮೃತದೇಹ ಬೇಗ ಸಿಗಬೇಕು, ಫ್ಲೈಟ್ ಅರೆಂಜ್ ಮಾಡಿ, ಕಳಿಸಿ ಎಂದು ಒತ್ತಾಯಿಸಿದ್ದಾರೆ.