ಉಡುಪಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಮಣಿಪುರದ ರೀತಿಯ ಘಟನೆ ನಡೆಯುತ್ತದೆ ಅಂತ ನಾವು ಹೇಳಬಹುದಾ ಎಂದು ಬಿಜೆಪಿಗೆ ಪರಿಷತ್ ಸದಸ್ಯ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ ಭಂಡಾರಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೊಲೀಸ್ ಠಾಣೆಗೆ ಕಲ್ಲು ತೂರಾಟ ಆಗುತ್ತೆ ಎಂದಿರುವ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಮಣಿಪುರದಲ್ಲಿ ಘಟನೆ ನಡೆದಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಮಣಿಪುರದ ರೀತಿಯ ಘಟನೆ ನಡೆಯುತ್ತೆ ಎಂದು ನಾವು ಹೇಳಬಹುದಾ? ಎರಡು ವರ್ಷದಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಈಗ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ಕೊಟ್ಟಿದ್ದಾರೆ. ಮೊದಲು ಬಿಜೆಪಿ ಅದಕ್ಕೆ ಉತ್ತರ ಕೊಡಲಿ. ಆಮೇಲೆ ಮೈಸೂರು ವಿಚಾರ ನೋಡೋಣ. ಇಂತಹ ಘಟನೆಗಳು ಆಗುವುದು ತಪ್ಪು. ನ್ಯಾಯ ಸಿಗದಿದ್ದರೆ ಕಾರ್ಯಾಂಗ, ನ್ಯಾಯಾಂಗದ ಮೊರೆ ಹೋಗಬಹುದು. ಹಂತ ಹಂತಗಳಲ್ಲಿ ನ್ಯಾಯ ಕೇಳುವ ಅವಕಾಶ ಪ್ರತಿಯೊಬ್ಬರಿಗೂ ಇದೆ. ಸಂವಿಧಾನ ನಮಗೆ ಅವಕಾಶ ನೀಡಿದೆ. ಯಾರು ಕೂಡ ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ಭದ್ರಾವತಿ ಶಾಸಕ ಸಂಗಮೇಶ್ ಪುತ್ರ, ಸರ್ಕಾರಿ ಮಹಿಳಾ ಅಧಿಕಾರಿಗೆ ಅವಹೇಳನ ಮತ್ತು ಅವಾಚ್ಯ ಶಬ್ದ ಬಳಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಘಟನೆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಗೌರವವನ್ನು ಸಂವಿಧಾನ ನೀಡಿದೆ. ಸಂವಿಧಾನ ರಕ್ಷಣೆ ಮಾಡಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಅಧಿಕಾರಿಗಳು ಸಂವಿಧಾನ ನೀಡಿದ ಹಕ್ಕನ್ನು ಚಲಾಯಿಸುತ್ತಾರೆ. ಯಾರೇ ಆದರೂ ಅದನ್ನು ಅಡ್ಡಿಪಡಿಸುವುದು ಸರಿಯಲ್ಲ. ಚುನಾಯಿತ ಪ್ರತಿನಿಧಿಯಾಗಲಿ ಪ್ರಜೆಯಾಗಲಿ ಯಾರೂ ಕೂಡ ಅಡ್ಡಿಪಡಿಸುವುದು ಸರಿಯಲ್ಲ. ಆ ರೀತಿ ಹೇಳಿಕೆ ನೀಡಿದ್ದರೆ ಅದನ್ನು ಖಂಡಿಸುತ್ತೇವೆ. ವೈಯಕ್ತಿಕವಾಗಿ ಮತ್ತು ಪಕ್ಷದ ನೆಲೆಯಲ್ಲಿ ಇದನ್ನು ಖಂಡಿಸುತ್ತೇನೆ ಎಂದಿದ್ದಾರೆ.