ಮಂಜು ಮಾಂಡವ್ಯ, ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಶ್ರೀ ಭರತ ಬಾಹುಬಲಿ ಟೀಸರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಗಣನೀಯ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಸಿತ್ತು. ಯಾವ ಸ್ಟಾರ್ ಡಮ್ ಕೂಡಾ ಇಲ್ಲದ ಈ ಸಿನಿಮಾ ಸುದ್ದಿಯಾಗಿದ್ದದ್ದೇ ಕ್ರಿಯೇಟಿವ್ ಅಂಶಗಳಿಂದ. ಭರತ ಬಾಹುಬಲಿಯದ್ದೊಂದು ವಿಶೇಷವಾದ ಕಥನ ಎಂಬ ನಂಬಿಕೆ ಬಿಡುಗಡೆಯ ಹೊತ್ತಿಗೆಲ್ಲ ಪ್ರೇಕ್ಷಕರ ಮನದಲ್ಲಿ ಪ್ರತಿಷ್ಠಾಪಿತಗೊಂಡು ಬಿಟ್ಟಿತ್ತು. ಆ ಎಲ್ಲ ನಿರೀಕ್ಷೆ, ಕಾತರಗಳನ್ನು ನಿಜವಾಗಿಸುವಂತೆ ಭರಪೂರ ಮನರಂಜನೆಯೊಂದಿಗೆ ಈ ಚಿತ್ರವೀಗ ತೆರೆಗಂಡಿದೆ. ಭರತ ಬಾಹುಬಲಿಯ ಕಾಮಿಡಿ ಝಲಕ್ಕಿನಿಂದಾಗಿ ಪ್ರೇಕ್ಷಕರೆಲ್ಲ ನಗುವಿನಲೆಯಲ್ಲಿ ಮಿಂದೆದ್ದು ಒಂದೊಳ್ಳೆ ಮನರಂಜನಾತ್ಮಕ ಸಿನಿಮಾ ನೀಡಿದ ತೃಪ್ತ ಭಾವದಿಂದ ಖುಷಿಗೊಂಡಿದ್ದಾರೆ.
Advertisement
ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಸಿನಿಮಾ ನಿರ್ದೇಶಕನಾಗಿ ತಮ್ಮ ಪ್ರತಿಭೆ ತೋರಿದ್ದ ಮಂಜು ಮಾಂಡವ್ಯ ಈ ಚಿತ್ರದ ಮೂಲಕ ನಾಯಕನಾಗಲೂ ಸೈ ಅನ್ನೋದನ್ನು ಪ್ರೂವ್ ಮಾಡಿದ್ದಾರೆ. ಚಿಕ್ಕಣ್ಣ, ಮಂಜು ಮಾಂಡವ್ಯ ಜುಗಲ್ ಬಂದಿ ತೆರೆ ಮೇಲೆ ಜಾದು ಸೃಷ್ಟಿಸಿದೆ. ಹೊಸ ರೀತಿಯ ಸ್ಕ್ರೀನ್ ಫ್ಲೇ, ಯಾವ ಹಂತದಲ್ಲಿಯೂ ಸಡಿಲಗೊಳ್ಳದ ಕಥೆ, ಪ್ರತಿ ಹಂತದಲ್ಲಿಯೂ ನಗುವಿನ ಸಿಂಚನ ಮಾಡುತ್ತಲೇ ಸಾಗುವ ಎಫೆಕ್ಟೀವ್ ಸಂಭಾಷಣೆಗಳೊಂದಿಗೆ ಈ ಚಿತ್ರ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ನಿಖರವಾಗಿ ಹೇಳಬೇಕೆಂದರೆ ಈ ಭರತ ಬಾಹುಬಲಿ ಉಢಾಳರಾದರೂ ಉರುಳಾಡಿ ನಗುವಂತೆ ಮಾಡುತ್ತಾರೆ.
Advertisement
Advertisement
ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಭರತ, ಬಾಹುಬಲಿ ಪಾತ್ರದಲ್ಲಿ ಮಿಂಚಿದ್ದಾರೆ. ಅವೆರಡೂ ಹಳ್ಳಿ ಕಂಪು ಹೊದ್ದುಕೊಂಡಿರುವಂಥಾ ಪಾತ್ರಗಳು. ಅದಕ್ಕೆ ಜೀವ ತುಂಬಿರೋ ರೀತಿಯೇ ಇಡೀ ಕಥೆಯ ನಿಜವಾದ ಜೀವಾಳ. ಪುಂಡ ಪೋಲಿಗಳಾಗಿ ತಲೆಹರಟೆ ಮಾಡಿಕೊಂಡು ಊರ ತುಂಬಾ ಅಂಡಲೆಯೋದೇ ಭರತ ಬಾಹುಬಲಿಯ ಫುಲ್ ಟೈಂ ಡ್ಯೂಟಿ. ಈ ನಡುವೆ ಹುಡುಗಾಟದಲ್ಲಿ ಮಾಡಿದ ಕೆಲಸವೇ ಅವರಿಬ್ಬರನ್ನು ಕಾನೂನಿನ ಸರಪಳಿಯಲ್ಲಿ ಬಂಧಿಗಳಾಗುವಂತೆ ಮಾಡುತ್ತದೆ. ಅಪ್ರಾಪ್ತ ಸ್ನೇಹಿತನಿಗೆ ಮದುವೆ ಮಾಡಿಸಿ ಜೈಲಿಗೆ ಸೇರೊ ಭರತ ಬಾಹುಬಲಿ ಬದುಕಿಗೆ ಎಂಟ್ರಿ ಕೊಡುವ ಶ್ರೀ ಇಡೀ ಚಿತ್ರದ ಚಿತ್ರಣವನ್ನೇ ಬದಲಿಸುತ್ತಾಳೆ. ಆ ನಂತರದಲ್ಲಿ ಕಥೆ ಮತ್ತಷ್ಟು ಓಘ ಪಡೆದುಕೊಳ್ಳುತ್ತದೆ. ಮುಂದೆ ಭರತ ಬಾಹುಬಲಿ ತಮ್ಮ ಪೋಲಿತನ ಬಿಟ್ಟು ಸರಿ ಹೋಗ್ತಾರಾ, ಭರತ ಬಾಹುಬಲಿ ಲೈಫಲ್ಲಿ ಏನೇನೆಲ್ಲ ಘಟಿಸುತ್ತವೆ ಅನ್ನೋ ಕುತೂಹಲ ನಿಮಗಿದ್ದರೆ ಈ ಚಿತ್ರವನ್ನು ಖಂಡಿತವಾಗಿಯೂ ಮಿಸ್ ಮಾಡದೆ ನೋಡಲೇಕು. ಇದನ್ನು ಓದಿ: ಗೆಳೆಯನ ಯಶಸ್ಸಿಗೆ ಹಾರೈಸಿದ ಯಶ್
Advertisement
ಇಂಥಾ ನಿರೀಕ್ಷೆ ಹೊತ್ತು ಯಾರೇ ಚಿತ್ರಮಂದಿರ ಹೊಕ್ಕರೂ ಭರತ ಬಾಹುಬಲಿ ಖಂಡಿತಾ ನಿರಾಸೆ ಮಾಡುವುದಿಲ್ಲ. ಇಲ್ಲಿರೋದು ತುಂಬ ಸರಳವಾದ ಕಥೆ. ಇಂಟ್ರಸ್ಟಿಂಗ್ ವೇನಲ್ಲಿ ಸ್ಕ್ರೀನ್ ಪ್ಲೇ ಹೆಣೆದು ಅದನ್ನು ತೆರೆ ಮೇಲೆ ಅಷ್ಟೇ ಚೆಂದವಾಗಿ ಪ್ರೊಜೆಕ್ಟ್ ಮಾಡುವ ಮೂಲಕ ನಿರ್ದೇಶಕ ಮಂಜು ಮಾಂಡವ್ಯ ಎಲ್ಲವನ್ನೂ ವಿಶೇಷವಾಗಿಸಿದ್ದಾರೆ. ನಟನಾಗಿಯೂ ಸೈ ಎನಿಸಿಕೊಂಡಿರೋ ಮಂಜು ಮಾಂಡವ್ಯ ಅದಕ್ಕಾಗಿ ತುಂಬಾನೇ ತಾಲೀಮು ನಡೆಸಿರೋದು ತೆರೆ ಮೇಲೆ ಸ್ಪಷ್ಟವಾಗಿಯೇ ಕಾಣಿಸುತ್ತದೆ. ಎಂದಿನಂತೆ ಚಿಕ್ಕಣ್ಣ ಎಲ್ಲರಿಗೂ ಇಷ್ಟವಾಗುತ್ತಾರೆ. ನಾಯಕಿ ಪಾತ್ರದಲ್ಲಿ ಸಾರಾ ಮಹೇಶ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಣಿಕಾಂತ್ ಕದ್ರಿ ಮ್ಯೂಸಿಕ್, ಫರ್ವೇಜ್ ಕೆ ಸಿನಿಮಾಟೋಗ್ರಫಿ ಎಲ್ಲರ ಮನಸೆಳೆಯುತ್ತದೆ. ಒಟ್ಟಾರೆಯಾಗಿ ಶ್ರೀ ಭರತ ಬಾಹುಬಲಿ ನಿರೀಕ್ಷೆ ಮೀರಿದ ಫೀಲ್ ಕೊಡುವಂತೆ ಮೂಡಿ ಬಂದಿದೆ.
ಚಿತ್ರ: ಶ್ರೀ ಭರತ ಬಾಹುಬಲಿ
ನಿರ್ದೇಶನ: ಮಂಜು ಮಾಂಡವ್ಯ
ನಿರ್ಮಾಪಕ: ಟಿ. ಶ್ರೀನಿವಾಸ್
ಸಂಗೀತ: ಮಣಿಕಾಂತ್ ಕದ್ರಿ
ತಾರಾಬಳಗ: ಮಂಜು ಮಾಂಡವ್ಯ, ಚಿಕ್ಕಣ್ಣ, ಸಾರಾ ಮಹೇಶ್, ಶ್ರೀನಿವಾಸ್ ಮೂರ್ತಿ, ಇತರರು.
ರೇಟಿಂಗ್: 3.5/5