ಇಂಫಾಲ್: ನಾಗರಿಕ ಸ್ಥಳಗಳ ಮೇಲೆ ಉಗ್ರರಿಂದ ದಾಳಿ ನಡೆಯುತ್ತಿರುವ ಬೆನ್ನಲ್ಲೇ ಮಣಿಪುರ ಪೊಲೀಸರು (Manipur Police) ಮಧ್ಯಮ ಶ್ರೇಣಿಯ ಮಷೀನ್ ಗನ್‌ಗಳನ್ನು (Machine Gun) ಖರೀದಿಸಿದ್ದು ಸಿಬ್ಬಂದಿಗೆ ತರಬೇತಿ ನೀಡಲು ಭಾರತೀಯ ಸೇನೆಯ (Indian Army) ಸಹಾಯವನ್ನು ಕೋರಿದ್ದಾರೆ.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮಣಿಪುರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ (Congress) ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯ ಪೊಲೀಸರು ಕುಕಿ ಸಮುದಾಯದ ವಿರುದ್ಧ ಹೋರಾಟಕ್ಕೆ ಮೈತೇಯಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳಿದೆ. ಈ ಸಂದರ್ಭದಲ್ಲಿ ಪೊಲೀಸರಿಗೆ ಮಷೀನ್ ಗನ್ ನೀಡಿರುವುದು, ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಬಹುದೆಂಬ ಆತಂಕವನ್ನು ರಾಜ್ಯ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ.
ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಲ್ಯಾಮ್ಟಿಂಥಾಂಗ್ ಹಾಕಿಪ್ ಅವರು ಈಗಾಗಲೇ ಹಿಂಸಾಚಾರದ ಉಲ್ಬಣಗೊಳ್ಳುತ್ತಿರುವ ರಾಜ್ಯವಾದ ಮಣಿಪುರದಲ್ಲಿ ಕೋಮುವಾದಿ ಪೊಲೀಸ್ ಕಮಾಂಡೋಗಳಿಗೆ ಮಧ್ಯಮ ಮಷೀನ್ ಗನ್ ಬಳಕೆಯನ್ನು ಅನುಮೋದಿಸಿದೆ. ಅದು ಹೇಗೆ ಮತ್ತು ಯಾರ ಮೇಲೆ ನಿಯೋಜಿಸುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರದ ಯೋಜನೆಗಳ ಹಣಕ್ಕೆ ಬ್ಯಾಂಕ್ ಕತ್ತರಿ – ಮಹಿಳೆಯರ ಆಕ್ರೋಶ
ಈ ವಿಚಾರಕ್ಕೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಹಲವು ದಶಕಗಳಿಂದ ನಮ್ಮ ಬಳಿ ಮಷೀನ್ ಗನ್‌ಗಳಿದ್ದವು. ಆದರೆ ಅವುಗಳ ಬಳಕೆ ಕಡಿಮೆಯಿತ್ತು. ಈಗ ಹೊಸ ಗನ್‌ಗಳ ಖರೀದಿ ನಡೆದಿದೆ ಅಷ್ಟೇ ಎಂದು ಹೇಳಿದ್ದಾರೆ.
ಆಗಸ್ಟ್‌ನಲ್ಲೇ ಉಗ್ರರು ರಾಕೆಟ್‌ಗಳನ್ನು ಪರೀಕ್ಷಿಸುತ್ತಿರುವ ಬಗ್ಗೆ ಮಣಿಪುರ ಪೊಲೀಸರು ಭದ್ರತಾ ಪಡೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಆದರೆ ಯಾರೂ ಆ ವರದಿಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಮಣಿಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 16 ತಿಂಗಳಿನಿಂದ ಮಣಿಪುರದಲ್ಲಿ ಸಂಘರ್ಷ ನಡೆಯುತ್ತಿದೆ. ಸೆ. 6 ರಂದು ಕುಕಿ ಉಗ್ರಗಾಮಿಗಳು ರಾಕೆಟ್ ಉಡಾಯಿಸಿದ್ದರು. ಈ ಬೆಳವಣಿಗೆಯ ನಂತರ ಪೊಲೀಸರು ಈಗ ಮಷೀನ್ ಗನ್ ಬಳಕೆಗೆ ಮುಂದಾಗಿದ್ದಾರೆ.
ಕಳೆದ 10 ದಿನಗಳಲ್ಲಿ, ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಕನಿಷ್ಠ ಎರಡು ಸ್ಥಳಗಳಲ್ಲಿ ರಾಕೆಟ್‌ಗಳನ್ನು ಉಡಾಯಿಸಲಾಗಿದೆ. ಸೆ.6 ರಂದು ಮಧ್ಯಾಹ್ನ ಬೆಟ್ಟದಿಂದ ಮಧ್ಯಾಹ್ನ 3:40 ಕ್ಕೆ ಉಡಾವಣೆಯಾಗಿತ್ತು. ಇದು ಸುಮಾರು 5-6 ಕಿಮೀ ಕ್ರಮಿಸಿ ಮೊಯಿರಾಂಗ್‌ನಲ್ಲಿರುವ ರಾಜ್ಯದ ಮೊದಲ ಮುಖ್ಯಮಂತ್ರಿ ಮೈರೆಂಬಮ್ ಕೊಯಿರೆಂಗ್ ಸಿಂಗ್ ಅವರ ಮನೆ ಮೇಲೆ ಬಿದ್ದಿತ್ತು. ಈ ರಾಕೆಟ್ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದರೆ 13 ವರ್ಷದ ಬಾಲಕಿ ಸೇರಿದಂತೆ ಮಾಜಿ ಮುಖ್ಯಮಂತ್ರಿಯ ಐವರು ಸಂಬಂಧಿಕರು ಗಾಯಗೊಂಡಿದ್ದರು.
ರಾಕೆಟ್ ಒಂದು ಸ್ಫೋಟಕ ಸಿಡಿತಲೆ ಮತ್ತು ಇನ್ನೊಂದು ಪ್ರೊಪೆಲ್ಲಂಟ್ ಅನ್ನು ಹೊಂದಿತ್ತು. ರಾಕೆಟ್ ತುದಿಯಲ್ಲಿ ಯೂರಿಯಾ, ಅಮೋನಿಯಂ ನೈಟ್ರೇಟ್ ಬಳಸಿ ಕಚ್ಚಾ ಬಾಂಬ್ ಅನ್ನು ಸೇರಿಸಲಾಗಿತ್ತು. ಇದರ ಸುತ್ತಲೂ ಲೋಹದ ಚಿಪ್ಸ್ ಅಥವಾ ಸೈಕಲ್ ಬಾಲ್ ಬೇರಿಂಗ್ ಅಳವಡಿಸಲಾಗಿತ್ತು.